ಹೈದರಾಬಾದ್: ಕಾನೂನು ಮತ್ತು ಸುವ್ಯವಸ್ಥೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಗುರುವಾರ ತಮ್ಮನ್ನು ಭೇಟಿ ಮಾಡಿದ ತೆಲುಗು ಚಲನಚಿತ್ರ ನಟರು, ನಿರ್ದೇಶಕರು ಮತ್ತು ನಿರ್ಮಾಪಕರ ನಿಯೋಗಕ್ಕೆ ತಿಳಿಸಿದ್ದಾರೆ.
ಇಂದು ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ತೆಲಂಗಾಣ ರಾಜ್ಯ ಪೊಲೀಸ್ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರದಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮತ್ತು ಟಾಲಿವುಡ್ ಉದ್ಯಮದ ನಿರ್ದೇಶಕರು, ನಿರ್ಮಾಪಕರು ಮತ್ತು ನಟರ ನಡುವೆ ಸಭೆ ನಡೆಯಿತು.
ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮದ(ಎಫ್‌ಡಿಸಿ) ಅಧ್ಯಕ್ಷ ದಿಲ್ ರಾಜು ನೇತೃತ್ವದಲ್ಲಿ ಟಾಲಿವುಡ್‌ನ ಪ್ರಭಾವಿ ವ್ಯಕ್ತಿಗಳ ನಿಯೋಗ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿತು. ನಿಯೋಗದಲ್ಲಿ ನಾಗಾರ್ಜುನ, ವರುಣ್ ತೇಜ್, ಸಾಯಿ ಧರಮ್ ತೇಜ್, ಕಲ್ಯಾಣ್ ರಾಮ್, ಶಿವ ಬಾಲಾಜಿ, ಅಡವಿ ಶೇಷ್, ನಿತಿನ್ ಮತ್ತು ವೆಂಕಟೇಶ್ ಸೇರಿದಂತೆ ಹಲವು ನಟ, ನಿರ್ದೇಶಕರು ಇದ್ದರು.
ಕಳೆದ ಡಿಸೆಂಬರ್ 4 ರಂದು, ನಟ ಅಲ್ಲು ಅರ್ಜುನ್ ಅವರು ಸಂಧ್ಯಾ ಥಿಯೇಟರ್‌ನಲ್ಲಿ ಪುಷ್ಪ 2 ದಿ ರೂಲ್‌ನ ಪ್ರಥಮ ಪ್ರದರ್ಶನಕ್ಕೆ ತೆರಳಿದ್ದರಿಂದ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು. ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ದಾರುಣವಾಗಿ ಸಾವನ್ನಪ್ಪಿದ್ದು, ಆಕೆಯ ಮಗುವಿಗೆ ಗಾಯಗಳಾಗಿದ್ದವು.
ಘಟನೆಯ ನಂತರ, ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಯಿತು ಮತ್ತು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.


