Tuesday, September 9, 2025
28.9 C
Bengaluru
Google search engine
LIVE
ಮನೆ#Exclusive Newsರಾಣಿ ಚನ್ನಮ್ಮನ ನಾಡಿನಲ್ಲಿ ಲಾಠಿಚಾರ್ಜ್ ಅಕ್ಷಮ್ಯ ಅಪರಾಧ: ವಿಜಯೇಂದ್ರ ಖಂಡನೆ

ರಾಣಿ ಚನ್ನಮ್ಮನ ನಾಡಿನಲ್ಲಿ ಲಾಠಿಚಾರ್ಜ್ ಅಕ್ಷಮ್ಯ ಅಪರಾಧ: ವಿಜಯೇಂದ್ರ ಖಂಡನೆ

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡವಳಿಕೆ, ಅಧಿಕಾರದ ದರ್ಪದಿಂದ ಮೆರೆಯುತ್ತಿದ್ದಾರೆ ಎಂದು ರಾಜ್ಯದ ಜನತೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದರು.
ಪಂಚಮಸಾಲಿ ಲಿಂಗಾಯತ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ನಡೆಸಿದ್ದನ್ನು ಖಂಡಿಸಿ ರಾಜ್ಯ ಬಿಜೆಪಿ ವತಿಯಿಂದ ಇಂದು ಬೆಳಗಾವಿ ಸುವರ್ಣಸೌಧದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು. ಇದೇವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಸ್ವಾಮೀಜಿ, ರೈತಾಪಿ ವರ್ಗದ ಧರಣಿ- ಹೋರಾಟದ ಸ್ಥಳಕ್ಕೆ ತೆರಳಿ ಮನವಿ ಸ್ವೀಕರಿಸಬೇಕಿತ್ತು. ಮುಖ್ಯಮಂತ್ರಿಗಳಿಗೆ ಏನು ಧಾಡಿ ಆಗಿತ್ತು ಎಂದು ಪ್ರಶ್ನಿಸಿದರು.
ಇಲ್ಲೇ ಸುವರ್ಣ ಸೌಧದಲ್ಲಿ ಇದ್ದರೂ ಸಹ ಮುಖ್ಯಮಂತ್ರಿಗಳು ಮನಸ್ಸು ಮಾಡಲಿಲ್ಲ. ಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿ ಮಾಡುವ ಸೌಜನ್ಯವನ್ನು ತೋರಲಿಲ್ಲ; ಬದಲಾಗಿ ಅಮಾಯಕರ ಮೇಲೆ ಲಾಠಿ ಚಾರ್ಜ್ ಮಾಡಿಸಿದ್ದು, ಚನ್ನಮ್ಮನ ನಾಡಿನಲ್ಲಿ ಲಾಠಿಚಾರ್ಜ್ ಆಗಿರುವುದು ಅಕ್ಷಮ್ಯ ಅಪರಾಧ ಎಂದು ಖಂಡಿಸಿದರು.
ಮುಖ್ಯಮಂತ್ರಿಗಳು ಯಾವ ಕಾರಣಕ್ಕೆ ಲಾಠಿ ಚಾರ್ಜ್ ಮಾಡಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಪಡೆಯುತ್ತೇವೆ. ದರ್ಪದಿಂದ ಮೆರೆದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಎರಡೂ ಸದನದಲ್ಲಿ ಇದನ್ನು ಆಗ್ರಹಿಸಲಿವೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಸರಕಾರದವರು ಮೂರೂ ಬಿಟ್ಟಿದ್ದಾರೆ. 136 ಶಾಸಕರಿದ್ದೇವೆ; ಅಧಿಕಾರ ಶಾಶ್ವತ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯನವರ ಸರಕಾರ ಇದ್ದಂತಿದೆ. ಹಿಂದಿನ ಅವಧಿಯಲ್ಲೂ ಇದೇರೀತಿ ನಡೆದುಕೊಂಡಿದ್ದು, ಸಿಎಂ ಅವರನ್ನು ಸದನದಲ್ಲಿ ಪ್ರಶ್ನಿಸುತ್ತೇವೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಆರಂಭವಾದ ಪ್ರತಿಭಟನೆ ಸಂದರ್ಭದಲ್ಲಿ ರಾಜ್ಯದ ಮಾಜಿ ಸಚಿವರು, ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಉಪಸ್ಥಿತರಿದ್ದರು.
ಮೀಸಲಾತಿ ನೀಡದ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ, ಪ್ರಾಣ ಕೊಟ್ಟೇವು ಮೀಸಲಾತಿ ಬಿಡೆವು, ಹೋರಾಟಗಾರರ ಮೇಲೆ ಹಲ್ಲೆ ನಡೆಸಿದ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಇವೇ ಮೊದಲಾದ ಭಿತ್ತಿಪತ್ರಗಳನ್ನು ಹಿಡಿದಿದ್ದ ಶಾಸಕರು, ವಿಧಾನಪರಿಷತ್ ಸದಸ್ಯರು ಸರಕಾರದ ಧೋರಣೆಯನ್ನು ಖಂಡಿಸಿ ವಿವಿಧÀ ಘೋಷಣೆಗಳನ್ನು ಕೂಗಿದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments