ಉಪಚುನಾವಣೆಯಲ್ಲಿ ಬಿಜೆಪಿಯ ಲೋಕಲ್ ಲೀಡರ್ ಗಳಿಂದ ಪ್ರಧಾನಿ ಮೋದಿಯವರೆಗೂ ಸರಣಿ ಸುಳ್ಳುಗಳನ್ನು ಹೇಳಿದರು. ನೀವು ಆರೋಪ ಸಾಬೀತುಪಡಿಸಿ, ನಾನು ರಾಜಕೀಯ ನಿವೃತ್ತಿ ತಗೊತೀನಿ ಎಂದು ಮೋದಿಯವರಿಗೆ ಸವಾಲು ಹಾಕಿದ್ದೆ. ಅವರು ಸವಾಲು ಸ್ವೀಕರಿಸುವ ಧೈರ್ಯ ತೋರಿಸಲಿಲ್ಲ ಎಂದು ಹೇಳಿದರು.ನಾನು 3 ದಿನಗಳ ಕಾಲ ಸಂಡೂರಿನಲ್ಲಿ ಪ್ರಚಾರ ಮಾಡಿದೆ. ಈ ವೇಳೆ ತುಕಾರಾಮ್ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಗಮನಿಸಿದ್ದೇನೆ. ತುಕಾರಾಮ್ ಅವರಿಗೂ ಮೊದಲು ಸಂಡೂರು ಹೇಗಿತ್ತು ಎನ್ನುವುದೂ ನನಗೂ ಗೊತ್ತು. ಈಗ ತುಕಾರಾಮ್ ಅವರು ಒಳ್ಳೆ ಕೆಲಸಗಳನ್ನು ಮಾಡಿರುವುದನ್ನು ನಾನು ನೋಡಿದ್ದೇನೆ.
ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ನಾಡಿನ ಜನತೆ ಎದುರಿಗೆ ಕೊಟ್ಟ ಎಲ್ಲಾ ಭರವಸೆಗಳನ್ನೂ ಹಂತ ಹಂತವಾಗಿ ಈಡೇರಿಸುತ್ತಿದ್ದೇವೆ. ನಮ್ಮ ಜನರ ಆರ್ಥಿಕ ಶಕ್ತಿ ಮತ್ತು ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ನಾವು ರೂಪಿಸಿ ಜಾರಿ ಮಾಡುವುದರ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ.
ವಕ್ಫ್ ವಿಚಾರದಲ್ಲೂ ಬಿಜೆಪಿಯ ರಾಷ್ಟ್ರೀಯ ನಾಯಕರಿಂದ ಲೋಕಲ್ ಲೀಡರ್ ಗಳವರೆಗೂ ಎಲ್ಲರೂ ಸರಣಿ ಸುಳ್ಳು ಅಪಪ್ರಚಾರ ಮಾಡಿದರು. ಪ್ರಧಾನಿ ಮೋದಿಯವರು ಮಹಾರಾಷ್ಟ್ರ ಚುನಾವಣೆಯಲ್ಲಿ 700 ಕೋಟಿ ಭ್ರಷ್ಟಾಚಾರದ ಆರೋಪ ಹೊರಿಸಿ ಭಾಷಣ ಮಾಡಿದರು. ನಾನು ಪ್ರಧಾನಿಗೆ ಸವಾಲು ಹಾಕಿದೆ, ನಿಮ್ಮ ಆರೋಪ ಸಾಬೀತು ಮಾಡಿ. ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎನ್ನುವ ನನ್ನ ಸವಾಲು ಸ್ವೀಕರಿಸಲು ಪ್ರಧಾನಿ ಮೋದಿ ಧೈರ್ಯ ಮಾಡಲಿಲ್ಲ. ಅವರಿಗೆ ಸುಳ್ಳು ಹೇಳುವುದಕ್ಕೆ ಮಾತ್ರ ಧೈರ್ಯ ಬರುತ್ತದೆ. ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಸಂಡೂರು ಜನತೆಗೆ ಅಭಿನಂದಿಸಿ ಭಾಷಣ ಮಾಡುವ ವೇಳೆ ಸಂಡೂರು ಕ್ಷೇತ್ರಕ್ಕೆ ವಸತಿ ಇಲಾಖೆಯಿಂದ ಹೆಚ್ಚುವರಿಯಾಗಿ 2,000 ಮನೆಗಳನ್ನು ನೀಡುವುದಾಗಿ ಘೋಷಿಸಿದರು. ಈಗಾಗಲೇ 2,172 ಮನೆಗಳನ್ನು ನೀಡಲಾಗಿದೆ. ಸಂಡೂರಿನಲ್ಲಿ ಬಡವರು ಹೆಚ್ಚಾಗಿರುವುದರಿಂದ ಮತ್ತು ನಂಜುಂಡಪ್ಪ ಅವರ ವರದಿಯಲ್ಲಿ ಹಿಂದುಳಿದ ತಾಲ್ಲೂಕಿನ ಪಟ್ಟಿಯಲ್ಲಿ ಇರುವುದರಿಂದ ಹೆಚ್ಚುವರಿಯಾಗಿ 2000 ಮನೆಗಳನ್ನು ನೀಡಲಾಗುವುದು ಎಂದು ಘೋಷಿಸಿದರು.


