ಮೈಸೂರು: ಮುಡಾ ನಿವೇಶನ ಹಂಚಿಕೆ ಅಕ್ರಮ ಬಗೆದಷ್ಟು ಬಯಲಾಗುತ್ತಿದೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಿವೇಶನಗಳನ್ನು 3 ಸಾವಿರ, 6 ಸಾವಿರ ರೂಪಾರಯಿಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. 3 ಸಾವಿರ ರೂಪಾಯಿಗೆ ಒಂದರಂತೆ ಬರೋಬ್ಬರಿ 23 ಸೈಟ್‌ಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಮುಡಾ ಬರೆದುಕೊಟ್ಟಿದೆ ಎಂಬ ಆರೋಪ ಕೆಳಿ ಬಂದಿದೆ. ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಬಡಾವಣೆ ಮಂಜುನಾಥ್ ಎಂಬುವರಿಂದ ಭೂಗಳ್ಳತನ ನಡೆದಿರುವ ಆರೋಪ ಕೇಳಿಬಂದಿದೆ.
ಪ್ರೋತ್ಸಾಹದಾಯಕ ಯೋಜನೆ ಹೆಸರಿನಲ್ಲಿ ಒಂದು ಸೈಟ್‌ಗೆ 3 ಸಾವಿರ ರೂಪಾಯಿಯಂತೆ ಒಟ್ಟು 23 ನಿವೇಶನಗಳನ್ನು ಉದ್ಯಮಿ ಮಂಜುನಾಥ್‌ಗೆ ಮುಡಾ ರಿಜಿಸ್ಟರ್ ಮಾಡಿಕೊಟ್ಟಿದೆ. ಕ್ರಯ ಪತ್ರದಲ್ಲಿ ಮಂಜುನಾಥ್ ಯಾವ ಜಾಗ ಕಳೆದುಕೊಂಡಿದ್ದಾರೆ ಎಂಬ ಮಾಹಿತಿಯೇ ಇಲ್ಲ. ಸುಮ್ಮನೆ ಪ್ರೋತ್ಸಾಹದಾಯಕ ಎಂದು ನಮೂದಿಸಿ ನಿವೇಶನಗಳ ರಿಜಿಸ್ಟರ್ ಮಾಡಲಾಗಿದೆ. ಒಟ್ಟು 6 ದಿನಗಳ ಅಂತರದಲ್ಲಿ ಪ್ರಾಧಿಕಾರಕ್ಕೆ ಸೇರಿದ ಎಲ್ಲಾ 23 ಸೈಟುಗಳನ್ನು ಉದ್ಯಮಿ ಮಂಜುನಾಥ್ ಹೆಸರಿಗೆ ರಿಜಿಸ್ಟರ್ ಮಾಡಲಾಗಿದೆ.
ಕೇವಲ 600 ರೂಪಾಯಿ ಶುಲ್ಕ ಕಟ್ಟಿಸಿಕೊಂಡು ಮುಡಾ ಕೋಟ್ಯಂತರ ಬೆಲೆ ಬಾಳುವ ನಿವೇಶನಗಳನ್ನು ಮಾರಾಟ ಮಾಡಿದೆ. ಈ ಅಕ್ರಮದಿಂದ ಸರ್ಕಾರಕ್ಕೆ ಪ್ರತಿ ನಿವೇಶನಕ್ಕೆ ಕನಿಷ್ಟ 97 ಲಕ್ಷ ನಷ್ಟವಾಗಿದೆ. 5 ಲಕ್ಷ ಶುಲ್ಕ ಪಾವತಿ ಸ್ಥಳದಲ್ಲಿ ಕೇವಲ 600 ರೂಪಾಯಿ ಪಾವತಿಯಾಗಿದೆ. ಉಪ ನೋಂದಣಾಧಿಕಾರಿ ಶಾಮೀಲಿನಿಂದ ಭಾರಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಮೂಲ ಮಾಲೀಕರ ಹೆಸರನ್ನು ಕೈ ಬಿಟ್ಟು ಜಿಪಿಎ ಪ್ರತಿನಿಧಿ ಮಂಜುನಾಥ್ ಹೆಸರಿಗೆ ನೇರವಾಗಿ 23 ನಿವೇಶನಗಳು ರಿಜಿಸ್ಟರ್ ಆಗಿವೆ. ಮೈಸೂರಿನ ಪ್ರತಿಷ್ಠಿತ ವಿಜಯನಗರ ಬಡಾವಣೆಯ 3 ಮತ್ತು 4ನೇ ಹಂತದಲ್ಲಿ ಉದ್ಯಮಿ ಮಂಜುನಾಥ್ ಎಂಬುವರಿಗೆ 60*40 ಅಳತೆಯ ನಿವೇಶನಗಳನ್ನು ಮಂಜೂರು ಮಾಡಲಾಗಿದೆ. ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ ಪ್ರಸ್ತುತ 60*40 ನಿವೇಶನದ ಬೆಲೆ ಸುಮಾರು 2 ಕೋಟಿ ರೂಪಾಯಿ ದಾಟಿದೆ. ಇಂತಹ ಕೋಟ್ಯಂತರ ಬೆಲೆ ಬಾಳುವ ನಿವೇಶನಗಳನ್ನು ಕೇವಲ ಮೂರು ಸಾವಿರ ರೂಪಾಯಿಗೆ ಒಂದರಂತೆ ಮುಡಾ ಮಂಜೂರು ಮಾಡಿಕೊಟ್ಟಿದೆ.
ಮುಡಾ ನಿವೇಶನಗಳ ಹಂಚಿಕೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಕಳೆದ 1 ವರ್ಷದ ಹಿಂಣದೆಯೇ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಂದಿನ ಆಯುಕ್ತ ಜಿ.ಟಿ.ದಿನೇಶ್ ಕುಮಾರ್, ವಿಶೇಷ ತಹಶೀಲ್ದಾರ್ ಶಿವಕುಮಾರ್, ಹೆಚ್ಚುವರಿ ಜಿಲ್ಲಾ ನೋಂದಣಾಧಿಕಾರಿ ಕಾವ್ಯ, ರಿಯಲ್ ಎಸ್ಟೇಟ್ ಉದ್ಯಮಿ ಎನ್.ಮಂಜುನಾಥ್ ವಿರುದ್ಧ ಕಳೆದ ಒಂದು ವರ್ಷದ ಹಿಂದೆ ಕೃಷ್ಣ ಎಂಬುವರು ಮೈಸೂರು ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ದಾಖಲಿಸಿದ್ದಾರೆ.


