ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ 2’ ಸಿನಿಮಾವು ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಬರುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲೇ ದೊಡ್ಡಮಟ್ಟದ ಬುಕ್ಕಿಂಗ್ ಆಗುತ್ತಿದೆ. ಹೀಗಿದ್ದರೂ, ಚಿತ್ರತಂಡಕ್ಕೆ ಮಾತ್ರ ಬೆಂಗಳೂರು ಬೇಡವಾಯಿತೇ ಪ್ರಶ್ನೆ ಮೂಡಿದೆ. ಕೇರಳ, ಪಾಟ್ನಾ, ಚೆನ್ನೈ, ಮುಂಬಯಿ ಹೀಗೆ ಹಲವೆಡೆ ಪ್ರಚಾರಕ್ಕೆ ತೆರಳಿದ್ದ ‘ಪುಷ್ಪ 2’ ಚಿತ್ರತಂಡ ಕರ್ನಾಟಕಕ್ಕೆ ಮಾತ್ರ ಬಂದಿಲ್ಲ. ಆದರೆ ಈ ಹಿಂದೆ ಚಿತ್ರತಂಡ ಮಾಡಿಕೊಂಡಿದ್ದ ಟೂರ್ ಪ್ಲಾನ್‌ನಲ್ಲಿ ಬೆಂಗಳೂರಿನ ಹೆಸರಿತ್ತು! ಕೊನೇ ಕ್ಷಣದಲ್ಲಿ ಅದೇಗೆ ಬದಲಾಯಿತೋ, ಪುಷ್ಪರಾಜನೇ ಬಲ್ಲ!
‘ಪುಷ್ಪ 2’ ಚಿತ್ರಕ್ಕೆ ಅತಿ ಹೆಚ್ಚು ಶೋ ಸಿಕ್ಕಿರುವುದು ಬೆಂಗಳೂರಿನಲ್ಲಿ. ಸಾಮಾನ್ಯವಾಗಿ ಬೇರೆ ಭಾಷೆ ಚಿತ್ರಗಳಿಗೆ ಇಲ್ಲಿ ಒಂದು ಸಾವಿರಕ್ಕೂ ಅಧಿಕ ಶೋಗಳನ್ನು ನೀಡಿರುವ ಉದಾಹರಣೆಗಳಿವೆ. ಈ ಹಿಂದೆ ‘ಕಲ್ಕಿ 2898 ಎಡಿ’, ‘ಗೋಟ್’, ‘ಲಿಯೋ’, ‘ಜೈಲರ್’ ಸಿನಿಮಾಗಳಿಗೆ ಬೆಂಗಳೂರಿನಲ್ಲೇ ಸಾವಿರಕ್ಕೂ ಅಧಿಕ ಶೋ ನೀಡಲಾಗಿತ್ತು. ಈಗ ‘ಪುಷ್ಪ 2’ ಸಿನಿಮಾ ಇವೆಲ್ಲದನ್ನೂ ಮೀರಿಸುವ ನಿರೀಕ್ಷೆಯಿದೆ. ಎಲ್ಲಾ ಭಾಷೆಯ ವರ್ಷನ್ ಕೂಡ ಇಲ್ಲಿ ರಿಲೀಸ್ ಆಗುತ್ತಿದ್ದು, ಸಿಂಹಪಾಲು ತೆಲುಗು ವರ್ಷನ್‌ಗೆ ಸಿಕ್ಕಿದೆ.
ಕನ್ನಡಿಗರ ಜೇಬು ಸುಡಲಿದೆ ಟಿಕೆಟ್ ದರ
ಟಿಕೆಟ್ ದರದ ವಿಷಯಕ್ಕೆ ಬಂದರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಪರಭಾಷೆಯ ದೊಡ್ಡ ದೊಡ್ಡ ಸಿನಿಮಾಗಳಿಗೆ 800 ರಿಂದ 1000 ರೂ. ದರ ಇರುತ್ತದೆ. ಆದರೆ ‘ಪುಷ್ಪ 2’ ಚಿತ್ರಕ್ಕೆ ಬೆಂಗಳೂರಿನ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲೂ 700ರಿಂದ 900 ರೂ.ಗೂ ಅಧಿಕ ದರ ನಿಗದಿಪಡಿಸಲಾಗಿದೆ. ಇನ್ನು, ಮಲ್ಟಿಪ್ಲೆಕ್ಸ್‌ನಲ್ಲಿ ಕೇಳಲೇಬೇಡಿ. ಕೆಲವು ಕಡೆ ಟಿಕೆಟ್ ದರ 2 ಸಾವಿರ ರೂ. ದಾಟಿದೆ. ಬೇರೆ ಯಾವುದೇ ಊರುಗಳಿಗೆ ಹೋಲಿಸಿದರೆ, ಬೆಂಗಳೂರಿನಲ್ಲೇ ಅತ್ಯಧಿಕ ಮೊತ್ತಕ್ಕೆ ‘ಪುಷ್ಪ 2’ ಸಿನಿಮಾದ ಟಿಕೆಟ್ ಅನ್ನು ಸೇಲ್ ಮಾಡಲಾಗುತ್ತಿದೆ. ಹೀಗಿದ್ದರೂ, ಕರುನಾಡಿನ ಮೇಲೆ ಇಷ್ಟೊಂದು ತಾತ್ಸಾರ ಭಾವ ಏಕೆ?