ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಬಿಪಿಎಲ್ ಕಾರ್ಡ್ ರದ್ದಾಗಿದ್ದಕ್ಕೆ ಮತ್ತು ಬಿಪಿಎಲ್ ಇದ್ದಿದ್ದನ್ನು ಎಪಿಎಲ್ಗೆ ಸೇರಿಸಿದ್ದಕ್ಕೆ ಜನರಿಂದ ಸರ್ಕಾರದ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು. ಸಾರ್ವಜನಿಕರ ವಿರೋಧದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಪಡಿತರ ಚೀಟಿ ಪರಿಷ್ಕರಣೆ ಕೈಬಿಟ್ಟಿತ್ತು. ಅಷ್ಟೇ ಅಲ್ಲದೆ, ಅರ್ಹತೆ ಇದ್ದರೂ ಬಿಪಿಎಲ್ ಕಾರ್ಡ್ನಿಂದ ವಂಚಿತರಾಗಿದ್ದವರಿಗೆ ಮರು ಪರಶೀಲನೆ ಭರವಸೆ ನೀಡಿತ್ತು. ಇದರಂತೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಆಹಾರ ಇಲಾಖೆ ಬಿಪಿಎಲ್ ಕಾರ್ಡ್ ಮರು ಪರಶೀಲನೆ ಮಾಡುತ್ತಿದೆ. ಅರ್ಹ ಫಲಾನುಭವಿಗಳ ಕಾರ್ಡ್‌ಗಳನ್ನು ಮತ್ತೆ ನೀಡಲು ಸರ್ಕಾರ ಮುಂದಾಗಿದೆ. ಆಧಾರ್, ಪ್ಯಾನ್ ಕಾರ್ಡ್, ಐಟಿ ರಶೀದಿ ಮುಂತಾದ ದಾಖಲೆಗಳ ಮೂಲಕ ಅರ್ಹತೆ ಪಡೆದವರು ಕಾರ್ಡ್‌ಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಿದೆ.
ಇನ್ನು ಬಿಪಿಎಲ್ ಕಾರ್ಡ್ ಮರು ಸ್ಥಾಪನೆಗೆ ಈ ಹಿಂದೆ ನವೆಂಬರ್ 25 ರವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ, ಎಪಿಎಲ್ ನಿಂದ ಬಿಪಿಎಲ್ಗೆ ಬದಲಾಯಿಸಲು ಅಧಿಕಾರಿಗಳಿಗೆ ಸಾಕಷ್ಟು ಕಾಲಾವಕಾಶ ಅಗತ್ಯವಿರುವ ಕಾರಣ ನವೆಂಬರ್ 28ರವರೆಗೆ ಅವಕಾಶ ನೀಡಲಾಗದೆ. ಈಗಾಗಲೇ ರಾಜ್ಯದಲ್ಲಿ ಶೇ 90 ರಷ್ಟು ಕಾರ್ಡ್‌ಗಳನ್ನು ಎಪಿಎಲ್ನಿಂದ ಬಿಪಿಎಲ್ ಮರುಸ್ಥಾಪನೆ ಮಾಡಲಾಗಿದೆ. ರಾಜಧಾನಿಯಲ್ಲಿ ಶೇ 95 ರಷ್ಟು ಬಿಪಿಎಲ್ ಕಾರ್ಡ್ ಮರುಸ್ಥಾಪನೆಯಾಗಿದೆ. ಉಳಿದ ಕಾರ್ಡ್ ಸರಿಪಡಿಸಲು ಇನ್ನೆರಡು ದಿನ ಕಾಲವಕಾಶ ಇದೆ.ತೆರಿಗೆ ಪಾವತಿದಾರರ 1,06,152 ಬಿಪಿಎಲ್ ಕಾರ್ಡ್‌ಗಳನ್ನು ಕೂಡಾ ಸಸ್ಪೆಂಡ್ ಮಾಡಲಾಗಿತ್ತು. ಸದ್ಯ ಈ ಕಾರ್ಡ್‌ಗಳನ್ನು ಮರುಸ್ಥಾಪನೆ ಮಾಡಿದ್ದು, ನಂತರದ ಹಂತದಲ್ಲಿ ಆಹಾರ ಇಲಾಖೆ ಮರು ಪರಶೀಲನೆ ಮಾಡಲಿದೆ.
ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಬಡವರಿಗೆ ತೊಂದರೆ ಆಗಿದ್ದರೆ, ಅಂತಹವರು ತಹಶೀಲ್ದಾರ್ ಗಮನಕ್ಕೆ ತರಲು ಸೂಚಿಸಲಾಗಿದೆ. ಅಂಥವರ ಸಮಸ್ಯೆಯನ್ನು ಒಂದು ವಾರದೊಳಗೆ ಬಗೆಹರಿಸುವಂತೆ ಸರ್ಕಾರ ಸೂಚಿಸಿದೆ. ಕೆಲವು ವಿಶೇಷ ಪ್ರಕರಣಗಳಲ್ಲಿ ಬಿಪಿಎಲ್ ಕಾರ್ಡ್ಗಳು ಎಪಿಎಲ್ಗೆ ಪರಿವರ್ತನೆಯಾಗಿದ್ದು, ಬಡವರು ಪರದಾಡುವಂತಾಗಿದೆ. ಹೀಗಾಗಿ ಸರ್ಕಾರ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದೆ.