ನವದೆಹಲಿ: ಅಧಿಕಾರಿಗಳು ನ್ಯಾಯಾಧೀಶರಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿ ಎಚ್ಚರಿಕೆ ನೀಡಿದೆ.
ಆರೋಪಿಗಳ ಮನೆಗಳನ್ನು ಸರ್ಕಾರಗಳು ಬುಲ್ಡೋಜರ್ ಬಳಸಿ ಧ್ವಂಸ ಮಾಡುತ್ತಿರುವನ್ನು ನಿಲ್ಲಿಸಲು ಆದೇಶ ನೀಡುವಂತೆ ಕೋರಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶವನ್ನು ಪ್ರಕಟಿಸಿದೆ.
ನಿರ್ದಾಕ್ಷಿಣ್ಯ ಕ್ರಮ ಕೈಗೊಂಡ ಅಧಿಕಾರಿಗಳಿಗೆ ಶಿಕ್ಷೆಯಾಗಲಿದೆ ಬುಲ್ಡೋಜರ್‌ಗಳನ್ನು ನಿರಂಕುಶವಾಗಿ ಬಳಸಿದರೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಪರಾಧಕ್ಕೆ ಶಿಕ್ಷೆ ನೀಡುವುದು ನ್ಯಾಯಾಲಯದ ಕೆಲಸ. ಆರೋಪಿ ಮತ್ತು ಶಿಕ್ಷೆಗೊಳಗಾದವರಿಗೂ ಕೆಲವು ಹಕ್ಕುಗಳಿವೆ. ಆರೋಪಿ ಎಂಬ ಕಾರಣಕ್ಕೆ ಮನೆ ಕೆಡವುವುದು ಕಾನೂನು ಉಲ್ಲಂಘನೆಯಾಗುತ್ತದೆ.
ನ್ಯಾ. ಬಿ.ಆರ್ ಗವಾಯಿ ನೇತೃತ್ವದ ದ್ವಿ ಸದಸ್ಯ ಪೀಠ ಸಾರ್ವಜನಿಕರ ಆಸ್ತಿ ಪಾಸ್ತಿ ನಾಶ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಸುಪ್ರೀಂ ಆದೇಶದಲ್ಲಿ ಏನಿದೆ?
ಬುಲ್ಡೋಜರ್ ಕ್ರಮಕ್ಕೆ ಮುನ್ನ ಆರೋಪಿಗಳ ಪರ ಆಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನಿಯಮಾನುಸಾರ ನೋಟಿಸ್ ಜಾರಿ ಮಾಡಬೇಕು. ನೋಟಿಸ್ ಅನ್ನು ನೋಂದಾಯಿತ ಅಂಚೆ ಮೂಲಕ ಕಳುಹಿಸಬೇಕು ಮತ್ತು ಮನೆಯ ಮೇಲೆ ಅಂಟಿಸಬೇಕು. ಆರೋಪಿಯ ಆಸ್ತಿಯನ್ನು ಕೆಡವಲು ನಿರ್ಧರಿಸುವುದು ಕಾರ್ಯಾಂಗದ ಕೆಲಸವಲ್ಲ. ಸರ್ಕಾರ ನಾಶ ಮಾಡುವ ಆಸ್ತಿಯ ಮಾಲೀಕರಿಗೆ 15 ದಿನಗಳ ಮುಂಚಿತವಾಗಿ ನೋಟಿಸ್ ನೀಡದೇ ಯಾವುದೇ ಆಸ್ತಿ ನೆಲಸಮವನ್ನು ನಡೆಸಬಾರದು. ಆಕ್ಷೇಪಣೆ ಸಲ್ಲಿಸಲು ಆರೋಪಿಯ ಮನೆಯವರಿಗೆ ಅವಕಾಶ ನೀಡಬೇಕು. ಕಟ್ಟಡ ತೆರವು ಕಾರ್ಯಚರಣೆಯನ್ನು ಸಂಪೂರ್ಣವಾಗಿ ಚಿತ್ರೀಕರಿಸಬೇಕು.


