ಕರ್ನಾಟಕದ ಮುಖ್ಯಮಂತ್ರಿಗಳು ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡದಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈಗಾಗಲೇ ನೀಡಲಾಗಿರುವ ನೋಟಿಸ್‌ಗಳನ್ನು ವಾಪಸ್ ಪಡೆಯುವಂತೆ ಸೂಚಿಸಲಾಗಿದೆ. ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಕಂದಾಯ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಭೂ ವಿವಾದಗಳನ್ನು ಬಗೆಹರಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಬೆಂಗಳೂರು, ನವೆಂಬರ್ 02: ವಕ್ಫ್ ಬೋರ್ಡ್ (Waqf Board) ಆಸ್ತಿ ವಿಚಾರವಾಗಿ ರೈತರಿಗೆ (Farmers) ನೋಟಿಸ್ ಯಾವುದೇ ನೋಟಿಸ್ ಕೊಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೊಟ್ಟಿರುವ ನೋಟಿಸ್ ವಾಪಸ್ ಪಡೆಯಿರಿ ಎಂದಿದ್ದಾರೆ. ತುಮಕೂರಿನಲ್ಲಿ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಲ್ಲಿಗೆ ಇದು ಮುಗಿದು ಹೋದ ಅಧ್ಯಾಯ. ಮುಂದೆ ಯಾವ ರೀತಿ ಬೆಳವಣಿಗೆ ಆಗುತ್ತೆ ಗೊತ್ತಿಲ್ಲ. ಕಂದಾಯ ಇಲಾಖೆಯಲ್ಲಿನ ದಾಖಲಾತಿ ಹಾಗೂ ವಕ್ಫ್ ದಾಖಲಾತಿಯಲ್ಲಿ ಒಂದೇ ಇದ್ದರೆ ಮಾತ್ರ ಯಾವುದೇ ಗೊಂದಲ ಆಗುವುದಿಲ್ಲ. ಅಂತಿಮವಾಗಿ ಕಂದಾಯ ದಾಖಲಾತಿ ಮುಖ್ಯ. ಅದರಲ್ಲಿ ಏನಿದೆಯೋ ಅದರಂತೆ ದಾಖಲಾಗಲಿದೆ. ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವ ಕೆಲಸ ಮಾಡಲ್ಲ ಎಂದು ಭರವಸೆ ನೀಡಿದರು.
ಪ್ರಧಾನಿ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ರಾಜಕೀಯ ಪುಡಾರಿ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ರಾಜಕೀಯ ಪುಡಾರಿ ಅಂದಿದ್ದು ಗೊತ್ತಿಲ್ಲ. ಪುಡಾರಿ ಅನ್ನೋದು ಸರಿನಾ? ತಪ್ಪಾ ಎಂದು ನನಗೆ ಗೊತ್ತಿಲ್ಲ. ನಮ್ಮನ್ನೂ ಪುಡಾರಿ ಅನ್ನುತ್ತಾರೆ. ಪುಡಾರಿ ಶಬ್ದ ಬಳಸುವುದು ಸರಿನಾ? ಎಂದು ಪ್ರಶ್ನಿಸಿದರು.