ಹಾಸನದ ಹಾಸನಾಂಬೆ ದರ್ಶನಕ್ಕೆ ಇಂದು ಕೊನೆಯ ದಿನವಾಗಿದೆ. ಸರಿಯಾಗಿ ಒಂಬತ್ತು ದಿನಗಳ ಹಿಂದೆ, ಅಂದರೆ ಅಕ್ಟೋಬರ್ 24 ಗುರುವಾರ ಹಾಸನಾಂಬೆ ದೇಗುಲದ ಬಾಗಿಲು ತೆರೆಯಲಾಗಿತ್ತು. ರವಿವಾರ ದೇಗುಲದ ಬಾಗಿಲು ಮುಚ್ಚಲಾಗುತ್ತದೆ. ಹೀಗಾಗಿ, ಶನಿವಾರ ದೇವಿ ದರ್ಶನಕ್ಕೆ ಕೊನೆ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದು, ದೇವಿ ದರ್ಶನ ಪಡೆಯುತ್ತಿದ್ದಾರೆ.
ಧರ್ಮದರ್ಶನದ ಸಾಲುಗಳು ಸಂಪೂರ್ಣ ಭರ್ತಿಯಾಗಿವೆ. ಶುಕ್ರವಾರದಿಂದ ವಿವಿಐಪಿ ಹಾಗೂ ವಿಐಪಿ ಪಾಸ್ಗಳು ರದ್ದು ಮಾಡಲಾಗಿದೆ. ರವಿವಾರ ನಸುಕಿನ ಜಾವ 4 ಗಂಟೆವರೆಗೂ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ, ಮಧ್ಯಾಹ್ನ 12ಕ್ಕೆ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತದೆ.
ಈ ವರ್ಷ ಹಾಸನಾಂಬೆ ಉತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ. ಈಗಾಗಲೆ ಲಕ್ಷಾಂತರ ಭಕ್ತರು ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಅಕ್ಟೋಬರ್ 24 ರಂದು ಮಧ್ಯಾಹ್ನ 12 ಗಂಟೆ 10 ನಿಮಿಷಕ್ಕೆ ಗರ್ಭಗುಡಿ ಬಾಗಿಲು ತೆರೆಯಲಾಯಿತು. ಇಲ್ಲಿಯವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯಾತಿ ಗಣ್ಯರು, ಸಿನಿ ತಾರೆಯರು ದೇವಿಯ ದರ್ಶನ ಮಾಡಿದ್ದಾರೆ.
ತಮ್ಮ ಇಷ್ಟಾರ್ಥ ಸಿದ್ದಿಸುವ ದೇವಿಯ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಗಂಟೆಗಟ್ಟಲೆ ಸರತಿ ಸಾಲುಗಳಲ್ಲಿ ನಿಂತು ಬಸವಳಿದರೂ ದಣಿಯದೆ ಖುಷಿಯಿಂದಲೇ ದೇವಿಯನ್ನು ಕಣ್ತುಂಬಿಕೊಂಡು ಆರದ ಜ್ಯೋತಿಯನ್ನ ಕಂಡು ಪುಳಕಗೊಂಡು ಆಶೀರ್ವಾದ ಪಡೆದಿದ್ದಾರೆ.