ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗುರುವಾರವಷ್ಟೇ ಪಾರ್ವತಿ ಅವರಿಗೆ ಲೋಕಾಯುಕ್ತ ಎಸ್ಪಿ ಉದೇಶ್ ನೋಟಿಸ್ ಜಾರಿ ಮಾಡಿದ್ದರು. ಶುಕ್ರವಾರ ಮೈಸೂರಿನ ಗೌಪ್ತ ಸ್ಥಳದಲ್ಲಿ ವಿಚಾರಣೆ ನಡೆಸಲಾಗಿದೆ.
ಇನ್ನು ಮುಡಾ ಪ್ರಕರಣ ವಿಚಾರವಾಗಿ ಈಗಾಗಲೇ ಎ3 ಮಲ್ಲಿಕಾರ್ಜುನಸ್ವಾಮಿ, ಎ4 ದೇವರಾಜು ಕರೆಸಿ ಮೈಸೂರು ಲೋಕಾಯುಕ್ತ ಪೊಲೀಸರು ವಿಚಾರಣೆ ಮಾಡಿದ್ದಾರೆ. ಆದರೆ A1 ಸಿಎಂ ಸಿದ್ದರಾಮಯ್ಯ ವಿಚಾರಣೆ ಮಾತ್ರ ಬಾಕಿ ಇದೆ. ಅಕ್ಟೋಬರ್ 18 – 19ರಂದು ಎರಡು ದಿನ ಕೇಂದ್ರದ ಜಾರಿನಿರ್ದೇಶನಾಲಯ ನಡೆಸಿದ್ದ ದಾಳಿಯಲ್ಲಿ ಹಲವಾರು ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರ ಹೆಸರಿನ ಜಮೀನನ್ನು ದೇವನೂರು ಬಡಾವಣೆ ನಿರ್ಮಿಸಲು ಮುಡಾ ವಶಪಡಿಸಿಕೊಂಡಿದ್ದರೂ ಆ ಭೂಮಿ ಇನ್ನೂ ಪಾರ್ವತಿಯವರ ಹೆಸರಿನಲ್ಲೇ ಇರುವುದು ಅದರಲ್ಲಿ ಪ್ರಮುಖ ದಾಖಲೆಯಾಗಿತ್ತು.
ಏಕೆಂದರೆ, ತನಿಖಾಧಿಕಾರಿ ಬಿಟ್ಟು ಲೋಕಾಯುಕ್ತ ಕಚೇರಿಯ ಯಾವ ಅಧಿಕಾರಿಗಳಿಗೂ ಪಾರ್ವತಿ ಅವರು ವಿಚಾರಣೆಗೆ ಬರುವ ಮಾಹಿತಿ ತಿಳಿದಿರಲಿಲ್ಲ ಎಂದು ಹೇಳಲಾಗಿದೆ. ಪಾರ್ವತಿ ಅವರ ವಿಚಾರದಲ್ಲಿ ಏಕೆ ಇಷ್ಟು ಗೌಪ್ಯತೆ ಎಂಬ ಪ್ರಶ್ನೆಯೂ ಎದ್ದಿದೆ. ಜೊತೆಗೆ ಪಾರ್ವತಿ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಗೌಪ್ಯತೆಗೆ ಕಾಯ್ದುಕೊಳ್ಳುವಂತೆ ಲೋಕಾಯುಕ್ತ ಅಧಿಕಾರಿಗೆ ನಿರ್ದೇಶನ ಇತ್ತಾ ಎಂಬ ಪ್ರಶ್ನೆಯೂ ಉದ್ಭವಿಸಿದೆ.
ಇದೇ ವೇಳೆ, ಮುಡಾ ಕೇಸ್ ತನಿಖೆ ಜೋರಾಗಿದೆ. ಇತ್ತೀಚೆಗಷ್ಟೇ ಮುಡಾ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದ ಇಡಿ ಈಗ ಅಧಿಕಾರಿಗಳಿಗೆ ನೋಟಿಸ್ ನೀಡಿದೆ. ತಹಶೀಲ್ದಾರ್ ರಾಜಶೇಖರ್ ಸೇರಿ ನಾಲ್ವರು ಅಧಿಕಾರಿಗಳಿಗೆ ನೋಟಿಸ್ ಕೊಟ್ಟಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.


