Wednesday, April 30, 2025
24 C
Bengaluru
LIVE
ಮನೆ#Exclusive Newsಮಳೆಗೆ ಸಂಬಂಧಿಸಿದ ದೂರುಗಳಿದ್ದರೆ ಬೆಂಗಳೂರು ನಿವಾಸಿಗಳು ಕೂಡಲೆ ಈ ನಂಬರ್​ಗೆ ಕರೆ ಮಾಡಿ ’1533’

ಮಳೆಗೆ ಸಂಬಂಧಿಸಿದ ದೂರುಗಳಿದ್ದರೆ ಬೆಂಗಳೂರು ನಿವಾಸಿಗಳು ಕೂಡಲೆ ಈ ನಂಬರ್​ಗೆ ಕರೆ ಮಾಡಿ ’1533’

ನಗರದಲ್ಲಿ ಪ್ರಸ್ತುತ ಹವಾಮಾನ ಬದಲಾವಣೆಯಿಂದಾಗಿ ಮೂರು-ನಾಲ್ಕು ದಿನಗಳಿಂದ ಹಲವಾರು ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದೆ. ಪ್ರವಾಹ ಪೀಡಿತ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಲು, ನಿರ್ವಹಿಸಲು ಮತ್ತು ಯಾವುದೇ ತುರ್ತು ಪರಿಸ್ಥಿತಿಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಪಾಲಿಕೆ, ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್, ಅಗ್ನಿ ಶಾಮಕ ದಳದ ತಂಡಗಳು 24/7 ಕಾರ್ಯನಿರ್ವಹಿಸುತ್ತಿವೆ. ಕೆಲವು ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗಿದ್ದು, ಆ ವಿವರ ವಲಯವಾರು ಈ ಕೆಳಕಂಡಂತಿದೆ.

1. ಯಲಹಂಕ ವಲಯ:

ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್:

ಯಲಹಂಕ ಕರೆಯ ಪಕ್ಕದಲ್ಲಿರುವ ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಕೆರೆಯ ಮಟ್ಟಕ್ಕಿಂತ ಕೆಳಗಿದ್ದು, ಕೆರೆ ಕೋಡಿ ಹೊರಹರಿವಿನಿಂದಾಗಿ ಅಪಾರ್ಟ್ಮೆಂಟ್‌ಗೆ ನೀರು ನುಗ್ಗಿದ್ದು, ನೀರಿನ ಹರಿವಿನ ಮಟ್ಟ ಸಾಕಷ್ಟಿದೆ. ಇದರಿಂದ ಅಪಾರ್ಟ್ಮೆಂಟ್ ಹಾಗೂ ರಸ್ತೆಯಲ್ಲಿ ನೀರು ನಿಂತಿದ್ದು, ನಿವಾಸಿಗಳನು ಸ್ಥಳಾಂತರ ಮಾಡುವುದರ ಜೊತೆಗೆ ಕುಡಿಯುವ ನೀರು ಹಾಗೂ ತಿಂಡಿ ವ್ಯವಸ್ಥೆ ಮಾಡಲಾಗಿದೆ.

ಅಪಾರ್ಟ್ಮೆಂಟ್‌ನಲ್ಲಿ 604 ಮನೆಗಳಿದ್ದು, ಸುಮಾರು 2500 ನಿವಾಸಿಗಳಿದ್ದಾರೆ. ಇನ್ನೂ 3/4 ದಿನ ಮಳೆಯಾಗುವ ಮುನ್ಸೂಚನೆಯಿದ್ದು, ಅಪಾರ್ಟ್ಮೆಂಟ್‌ನಲ್ಲಿರುವ ಎಲ್ಲಾ ನಿವಾಸಿಗಳನ್ನು ಸುರಕ್ಷತೆಯ ದೃಷ್ಟಿಯಿಂದ 8 ದಿನಗಳ ಕಾಲ ಬೇರೆಡೆ ಸ್ಥಳಾಂತರವಾಗಲು ಸೂಚಿಸಲಾಗಿದೆ. ಅದರಂತೆ ಈಗಾಗಲೇ ಬಹುತೇಕ ನಿವಾಸಿಗಳು ಬೇರೆಡೆ/ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಎನ್.ಡಿ.ಆರ್.ಎಫ್ ನ 16 ಬೋಟ್‌ಗಳ ಮೂಲಕ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.

ಅಪಾರ್ಟ್ಮೆಂಟ್ ಗೆ ಬರುವ ನೀರನ್ನು ತಡೆಯಲು ಪಾಲಿಕೆಯಿಂದ ತಾತ್ಕಾಲಿಕವಾಗಿ ಅಡ್ಡಲಾಗಿ ಮರಳು ಚೀಲಗಳು ಹಾಕಲಾಗಿದೆ. ಅಲ್ಲದೆ ನೀರುಗಾಲುವೆಯ ಪಕ್ಕದಲ್ಲೇ ಕಚ್ಚಾ ಡ್ರೈನ್ ಮಾಡಿ ಅದರ ಮೂಲಕ ನೀರು ಹರಿದು ಹೋಗುವಂತೆ ಮಾಡಲಾಗಿದೆ. ಸ್ಥಳದಲ್ಲಿ ಎನ್.ಡಿ.ಆರ್.ಎಫ್ ನ 75 ಸಿಬ್ಬಂದಿ, ಬಿಬಿಎಂಪಿಯ 25 ಅಧಿಕಾರಿ/ಸಿಬ್ಬಂದಿ, ಎಸ್.ಡಿ.ಆರ್.ಎಫ್ ನ 25 ಸಿಬ್ಬಂದಿ, ಅಗ್ನಿ ಶಾಮಕ ದಳದ 20 ಸಿಬ್ಬಂದಿ ಸ್ಥಳದಲ್ಲಿದ್ದಾರೆ. ಅಗ್ನಿ ಶಾಮಕದ 2 ವಾಹನಗಳು ಸ್ಥಳದಲ್ಲಿವೆ.

ಟಾಟಾ ನಗರ ಸುತ್ತಮುತ್ತಲಿನ ಪ್ರದೇಶ ಪರಿಶೀಲನೆ:

ಮಳೆಯಿಂದಾಗಿ ಜಲಾವೃತವಾಗೊಂಡಿರುವ ಪ್ರದೇಶವಾದ ಟಾಟಾ ನಗರ ವ್ಯಾಪ್ತಿಯಲ್ಲಿ ಮಾನ್ಯ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಶ್ರೀ ಕೃಷ್ಟ ಬೈರೇಗೌಡ, ಆಡಳಿತಗಾರರಾದ ಶ್ರೀ ಎಸ್.ಆರ್ ಉಮಾಶಂಕರ್, ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಜಲಾವೃತವಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳಿಯ ನಿವಾಸಿಗಳಿಗೆ ಹಾಲು, ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ ನೀರು ಹೊರ ಹಾಕಲು ಹೆಚ್ಚುವರಿಯಾಗಿ ಅಗ್ನಿಶಾಮಕ ವಾಹನಗಳು, ಪಂಪ್ ಗಳ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ.

ಈ ವೇಳೆ ವಲಯ ಆಯುಕ್ತರಾದ ಕರೀಗೌಡ, ವಲಯ ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿನ್, ಪ್ರಧಾನ ಅಭಿಯಂತರರಾದ ಪ್ರಹ್ಲಾದ್ ಸೇರಿದಂತೆ ಇನ್ನಿತರೆ ಅಧಿಕಾರಿಳು ಸ್ಥಳದಲ್ಲಿದ್ದರು.

ಜಲಾವೃತವಾಗಿರುವ ಪ್ರದೇಶಗಳ ಮಾಹಿತಿ:

ನರಸಾಪುರ ಕೆರೆ ಮತ್ತು ದೊಡ್ಡಬೊಮ್ಮಸಂದ್ರ ಕೆರೆ ತುಂಬಿ ಕೋಡಿ ಮೂಲಕ ಬರುವ ನೀರು ನೀರುಗಾಲುವೆಗಳಲ್ಲಿ ತುಂಬಿ ಹರಿಯುತ್ತಿದೆ. ಈ ಪರಿಣಾಮ ಬ್ಯಾಟರಾಯನಪುರ ವ್ಯಾಪ್ತಿಯ ಬದ್ರಪ್ಪ ಲೇಔಟ್, ಬಾಲಾಜಿ ಲೇಔಟ್, ಸುರಭಿ ಲೇಔಟ್, ಸೋಮೇಶ್ವರ ಬಡಾವಣೆ ಬಸವ ಸಮಿತಿ, ಟಾಟಾ ನಗರ, ಚಿಕ್ಕ ಬೊಮ್ಮಸಂದ್ರ, ಆಂಜನೇಯ ಲೇಔಟ್, ವಾಯುನಂದನ ಲೇಔಟ್ ಸಂಪೂರ್ಣ ಜಾಲಾವೃತವಾಗಿದ್ದು, ಪಾಲಿಕೆ, ಅಗ್ನಿ ಶಾಮಕದಳ, ಎನ್.ಡಿ.ಆರ್.ಎಫ್ ತಂಡ ಸೇರಿ ನೀರನ್ನು ತೆರವುಗೊಳಿಸುವ ಕಾರ್ಯದಲ್ಲಿ ಸಕ್ರಿಯವಾಗಿದ್ದಾರೆ.

ಸ್ಥಳೀಯ ನಿವಾಸಿಗಳಿಗೆ ಪಾಲಿಕೆ ವತಿಯಿಂದ ಹಾಲು, ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ನಿವಾಸಿಗಳ ಸ್ಥಳಾಂತರಕ್ಕಾಗಿ ಈಗಾಗಲೇ 1 ಬೋಟ್ ನಿಯೋಜಿಸಲಾಗಿದ್ದು, ಹೆಚ್ಚುವರಿಯಾಗಿ 2 ಬೋಟ್‌ಗಳನ್ನು ನಿಯೋಜಿಸಲಾಗುವುದು.

ಮೇಲಿನ‌ ಪ್ರದೇಶಗಳಲ್ಲಿ ಇಂದು ಕೂಡಾ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು, ಅಧಿಕಾರಿ/ಸಿಬ್ಬಂದಿಗಳನ್ನು ಸ್ಥಳದಲ್ಲಿಯೇ ಇದ್ದು, ಸಮಸ್ಯೆ ಬಗೆಹರಿಸುವ ಕಾರ್ಯದಲ್ಲಿ ನಿರತರಾಗಲಿದ್ದಾರೆ.

ಚಿತ್ರಕೂಟ ಅಪಾರ್ಟ್ಮೆಂಟ್:

ಸಹಕಾರ ನಗರದ ಚಿತ್ರಕೂಟ ಅಪಾರ್ಟ್ಮೆಂಟ್‌ನ ಕಾಂಪೌಂಡ್ ಕುಸಿತದಿಂದಾಗಿ, ಅಪಾರ್ಟ್ಮೆಂಟ್ ಪಕ್ಕದ ರಾಜಕಾಲುವೆಯಲ್ಲಿ ಹರಿಯುವ ಚರಂಡಿ ನೀರು ಅಪಾರ್ಟ್ಮೆಂಟ್‌ಗೆ ನುಗ್ಗಿದೆ. ಇದರಿಂದಾಗಿ 3 ಅಡ್ಡ ರಸ್ತೆಗಳು ಜಲಾವೃತಗೊಂಡಿವೆ. ಈ ಅಪಾರ್ಟ್ಮೆಂಟ್ ಪಕ್ಕದಲ್ಲಿರುವ ಕೈಸರ್ ರೆಸಿಡೆನ್ಸಿ ಕೂಡ ಜಲಾವೃತಗೊಂಡಿದ್ದು, ನೀರನ್ನು ಪಂಪ್ ಮೂಲಕ ತೆರವುಗೊಳಿಸಲಾಗಿದೆ.

ರಮಣಶ್ರೀ ಕ್ಯಾಲಿಫೋರ್ನಿಯಾ:

ಪುಟ್ಟೇನಹಳ್ಳಿ ಕೆರೆ ಪಕ್ಕದ ರಮಣಶ್ರೀ ಕ್ಯಾಲಿಫೋರ್ನಿಯಾ ಗಾರ್ಡನ್ ನಲ್ಲಿ ನೀರುಗಾಲುವೆ ನೀರು ಹರಿದು ಜಲಾವೃತವಾಗಿದೆ. ನೀರು ಬೇರೆಡೆ ಹೋಗಬೇಕಾದರೆ ನಿರುಗಾಲುವೆ ನಿರ್ಮಾಣ ಮಾಡುವ ಅವಶ್ಯಕತೆಯಿದ್ದು, ಪುಟ್ಟೇನಹಳ್ಳಿ ಕೆರೆ ಅರಣ್ಯ ಇಲಾಖೆಯ ಅಧೀನದಲ್ಲಿರುವ ಸಂರಕ್ಷಿತ ಪಕ್ಷಿಧಾಮವಾಗಿದೆ. ನೀರುಗಾಲುವೆ ನಿರ್ಮಾಣ ಮಾಡುವ ಸಲುವಾಗಿ ಎನ್‌ಜಿಟಿ ಪ್ರಕರಣ ಅಕ್ಟೋಬರ್ 25 ರಂದು ವಿಚಾರಣೆಗೆ ಬರಲಿದೆ. ಸದ್ಯ ಕೆರೆಯ ಕಟ್ಟೆ ಉದ್ದಕ್ಕೂ ಹ್ಯೂಮ್ ಪೈಪ್ ಹಾಕಿ ನೀರು ಹೊರ ಹಾಕುವ ಕೆಲಸ ಮಾಡಲಾಗುವುದು. ಸುಮಾರು 25 ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳನ್ನು ಸ್ಥಳಾಂತರಿಸಲು ಎನ್.ಡಿ.ಆರ್.ಎಫ್ ತಂಡವು ಕಾರ್ಯಪ್ರವೃತ್ತವಾಗಿದೆ.

2. ಮಹದೇವಪುರ ವಲಯ:

ಮಹದೇವಪುರ ವಲಯದಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದು, ನಿನ್ನೆ ರಾತ್ರಿ, ಹೊರಮಾವು – 73 ಮಿಮೀ, ಮಾರತಳ್ಳಿ – 34 ಮಿಮೀ ಅತಿ ಹೆಚ್ಚು ಮಳೆಯಾಗಿದೆ. ಯಲಹಂಕ ಪ್ರದೇಶದಲ್ಲಿ ಭಾರೀ ಮಳೆಯಾದ ಪರಿಣಾಮ ಸಾಯಿಬಾಬಾ ಲೇಔಟ್ ಮತ್ತು ಗೆದ್ದಲಹಳ್ಳಿ ಬಳಿಯ ವಡ್ಡರಪಾಳ್ಯದಲ್ಲಿ ಹೆಬ್ಬಾಳ ವ್ಯಾಲಿಯಿಂದ ನೀರು ಹಿಮ್ಮುಖವಾಗಿ ಚಲಿಸಿ ಜಲಾವೃತವಾಗಿದೆ. ನೀರು ನುಗ್ಗಿರುವ ಮನೆಗಳಲ್ಲಿ, ಪಂಪ್‌ಗಳ ಮೂಲಕ ನೀರು ಹೊರ ಹಾಕುವ ಕೆಲಸ ಮಾಡಲಾಗುತ್ತಿದೆ. ರಸ್ತೆಗಳಲ್ಲಿ ನಿಂತಿರುವ ನೀರನ್ನು ಸಂಪೂರ್ಣವಾಗಿ ತೆರವುಗೊಳಿಸುವ ಕಾರ್ಯ ಸಕ್ರಿಯವಾಗಿ ನಡೆಯುತ್ತಿದೆ.

ಬೈರತಿ ಗ್ರಾಮ ಮತ್ತು ಬ್ಲೆಸ್ಸಿಂಗ್ ಗಾರ್ಡನ್ ಪ್ರದೇಶ ಹಾಗೂ ಸ್ಥಳೀಯ ಪ್ರದೇಶಗಳಲ್ಲಿ ತಗ್ಗು ಪ್ರದೇಶಗಳಲ್ಲಿರುವ ಕೆಲ ಮನೆಗಳಿಗೆ ನೀರು ನುಗ್ಗಿದ್ದು, ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಇನ್ನು ಹಾಲನಾಯಕನಹಳ್ಳಿ ಕೆರೆ ಕೋಡಿ ತುಂಬಿ ರೇನ್ಬೋ ಡ್ರೈವ್ ಅಪಾರ್ಟ್ಮೆಂಟ್ ಪ್ರದೇಶ ಹಾಗೂ ಜುನ್ನಸಂದ್ರದಲ್ಲಿ ನೀರು ನುಗ್ಗಿದೆ. ರಸ್ತೆ ಬದಿ ನೀರು ನಿಂತಿರುವುದನ್ನು ತೆರವುಗೊಳಿಸಲಾಗಿದೆ.

3. ದಾಸರಹಳ್ಳಿ ವಲಯ:

ದಾಸರಹಳ್ಳಿ ವಲಯದ ಅಬ್ಬಿಗೆರೆ ಕೆರೆ ತುಂಬಿ ಕೋಡಿ ಹರಿಯುತ್ತಿದೆ. ಕೋಡಿಯಿಂದ ರಸ್ತೆಗೆ ನೀರು ನುಗ್ಗಿ ಸಪ್ತಗಿರಿ ಮತ್ತು ನಿಸರ್ಗ ಲೇಔಟ್‌ಗಳಲ್ಲಿ ನೀರು ತುಂಬಿದ್ದು, ನೀರನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ನಿಸರ್ಗ ಲೇಔಟ್ ಮತ್ತು ಸಪ್ತಗಿರಿ ಲೇಔಟ್ ಹೊರತುಪಡಿಸಿ ಉಳಿದವುಗಳಲ್ಲಿ ನೀರನ್ನು ತೆರವುಗೊಳಿಸಲಾಗಿದೆ. ನಿಸರ್ಗ ಲೇಔಟ್, ಸಪ್ತಗಿರಿ ಲೇಔಟ್, ಪಾರ್ವತಿ ಲೇಔಟ್, ಮಿತ್ರ ಲೇಔಟ್, ಪೀಣ್ಯ ಕೈಗಾರಿಕಾ ಪ್ರದೇಶ ಮತ್ತು ಬೆಲ್ಮಾರ್ಗ್ ಲೇಔಟ್‌ಗಳಲ್ಲಿ 25 ರಿಂದ 30 ಮನೆಗಳು ಜಲಾವೃತಗೊಂದ್ದು, ನೀರು ತೆರವು ಕಾರ್ಯ ಪ್ರಗತಿಯಲ್ಲಿದೆ.

ದೂರುಗಳಿದ್ದರೆ 1533ಗೆ ಕರೆ ಮಾಡಿ:

ಪಾಲಿಕೆಯ ಅಧಿಕಾರಿಗಳು ಸಮಸ್ಯೆಯಾಗಿರುವ ಕಡೆ ಸ್ಥಳದಲ್ಲಿದ್ದು, ಬಗೆಹರಿಸುವ ಕೆಲಸ ಮಾಡುತ್ತಿದ್ದಾರೆ. ಮಳೆ ಸಂಬಂಧಿಸಿದ ದೂರುಗಳಿದ್ದರೆ ನಾಗರೀಕರು ಕೂಡಲೆ ದಯಮಾಡಿ 1533 ಕರೆ ಮಾಡಲು ಮನವಿ ಮಾಡಲಾಗಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments