ಕರ್ನಾಟಕ ರಾಜ್ಯದಲ್ಲಿರುವ ಕೊರಗ, ಕೊಡವ, ಬಡಗ, ಸಿದ್ಧಿ, ಕುರುಬ ಮೊದಲಾದ ಸಣ್ಣ ಸಣ್ಣ ಭಾಷೆಗಳನ್ನು ಸಂರಕ್ಷಿಸಿಕೊಳ್ಳಲು ಕರ್ನಾಟಕಕ್ಕೊಂದು ಸಶಕ್ತವಾದ ಭಾಷಾ ನೀತಿ ರಚನೆಗೆ ಸರ್ಕಾರ ಮುಂದಾಗಿರುವುದು ಅತ್ಯಂತ ಸ್ವಾಗತಾರ್ಹ ಸಂಗತಿ ಮತ್ತು ಸರ್ಕಾರದ ಈ ತೀರ್ಮಾನವು ಕನ್ನಡ ಭಾಷೆಯನ್ನು ಇನ್ನಷ್ಟು ಸಮಗ್ರ ಮತ್ತು ಸಶಕ್ತಗೊಳಿಸಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಿಸಿದ್ದಾರೆ.
ಈ ಕುರಿತಂತೆ ರಾಜ್ಯ ಸರ್ಕಾರವು ಇಂದು ಹೊರಡಿಸಿರುವ ತಜ್ಞರ ಸಮಿತಿ ರಚನೆ ಅಧಿಸೂಚನೆಗೆ ಪ್ರತಿಕ್ರಿಯಿಸಿರುವ ಡಾ.ಬಿಳಿಮಲೆ, ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡದೊಂದಿಗೆ ಕರ್ನಾಟಕದಲ್ಲಿ ಉರ್ದು ಭಾಷೆಯೂ ಸೇರಿದಂತೆ ಅನೇಕ ಉಪ ಭಾಷೆಗಳು ಬೆಳೆದಿವೆ. ಈ ಉಪ ಭಾಷೆಗಳು ಕನ್ನಡವನ್ನು ಹೆಚ್ಚು ಶ್ರೀಮಂತಗೊಳಿಸುವುದರ ಜೊತೆಗೆ ಅದರ ಪ್ರಾದೇಶಿಕ ವೈವಿಧ್ಯತೆಗೂ, ಅದರ ಅನನ್ಯ ಗುಣಕ್ಕೂ ಕಾರಣವಾಗಿವೆ. ಈ ವೈವಿಧ್ಯಗಳನ್ನು ಮೊದಲು ಗುರುತಿಸಿದವನು ಕ್ರಿ.೯೫೦ ರಲ್ಲಿ ಕವಿರಾಜ ಮಾರ್ಗವನ್ನು ಬರೆದ ಶ್ರೀವಿಜಯ ಎಂದಿರುವ ಡಾ.ಬಿಳಿಮಲೆ, ʼಕನ್ನಡದ ವೈವಿಧ್ಯಗಳನ್ನು ಆದಿಶೇಷನೂ ಅರಿಯಲಾರʼ ಎಂಬರ್ಥದ ಮಾತುಗಳನ್ನು ಬರೆದ ಶ್ರೀವಿಜಯನು ʼಕನ್ನಡಂಗಳ್ʼ ಎಂಬ ಪ್ರಯೋಗವನ್ನು ಮಾಡುತ್ತಾನೆ ಎಂದು ನೆನಪಿಸಿಕೊಂಡಿದ್ದಾರೆ.
ಕನ್ನಡದ ಉಪ ಭಾಷೆಗಳೊಂದಿಗೆ ಹಲವು ಸ್ವತಂತ್ರ ಭಾಷೆಗಳೂ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ. ಹಿರಿಯ ಬರಹಗಾರರಾದ ದ.ರಾ.ಬೇಂದ್ರೆ, ಗೋವಿಂದಪೈ, ದೇವನೂರು ಮಹಾದೇವ, ಶಿವರಾಮ ಕಾರಂತ, ಚನ್ನಣ್ಣ ವಾಲೀಕಾರ, ಚಂದ್ರಶೇಖರ ಪಾಟೀಲ, ವೈದೇಹಿ, ಎಂ.ಎಂ.ಕಲಬುರ್ಗಿ, ಬಿ.ಎ.ವಿವೇಕ ರೈ ಮೊದಲಾದ ಶ್ರೇಷ್ಠ ಲೇಖಕ-ಲೇಖಕಿಯರು ಪ್ರಾದೇಶಿಕ ಕನ್ನಡವನ್ನು ಬಳಸಿ, ಬರೆದು ಪ್ರಖ್ಯಾತರಾಗಿದ್ದಾರೆ. ಕನ್ನಡದ ಶ್ರೀಮಂತಿಕೆಯನ್ನು ತುಳು, ಕೊಡವ, ಹವ್ಯಕ, ಅರೆಭಾಷೆ, ಉರ್ದು ಮೊದಲಾದ ಭಾಷೆಗಳ ಸಂಯೋಜನೆಯ ಮೂಲಕ ಬಳಸಿ ಬರೆದವರೂ ಇದ್ದಾರೆ. ಕರ್ನಾಟಕದ ದಲಿತರ ಭಾಷಾ ವೈವಿಧ್ಯವಂತೂ ಅಚ್ಚರಿ ಹುಟ್ಟಿಸುವಷ್ಟು ವೈವಿಧ್ಯವೂ ಶ್ರೀಮಂತವೂ ಆಗಿದೆ ಎಂದು ಡಾ.ಬಿಳಿಮಲೆ ಹೇಳಿದ್ದಾರೆ.
ಕರ್ನಾಟಕವು ಭಾಷಾ ದೃಷ್ಠಿಯಿಂದ ಸಮೃದ್ಧವಾಗಿದ್ದರೂ ಯುನೆಸ್ಕೊ ಹೇಳಿರುವಂತೆ ಕರ್ನಾಟಕದ ಸಂಸ್ಕೃತಿಯ ಭಾಗವಾದ 72 ಭಾಷೆಗಳು ಪತನಮುಖಿಯಾಗುತ್ತಿದ್ದು, ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡದ ಸಮೃದ್ಧಿಗಾಗಿ ಸಹಕರಿಸಿದ ಭಾಷೆಗಳನ್ನು ಉಳಿಸುವ ಮೂಲಕ ಕನ್ನಡವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಯೋಜನೆಯನ್ನು ರೂಪಿಸಿದೆ. ಕನ್ನಡವನ್ನು ಬೆಳೆಸಿದ ಇತರ ಸಣ್ಣ ಭಾಷೆಗಳನ್ನು ಸಂರಕ್ಷಿಸಿಕೊಳ್ಳಲು ಇಡೀ ದೇಶಕ್ಕೆ ಮಾದರಿಯಾಗಲಿರುವ ಭಾಷಾ ನೀತಿಯನ್ನು ರೂಪಿಸಲು ಮುಂದಾಗಿದೆ ಎಂದು ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಖ್ಯಾತ ಭಾಷಾ ಶಾಸ್ತ್ರಜ್ಞರಾದ ಪ್ರೊ.ಜಿ.ಎನ್.ದೇವಿರವರ ನೇತೃತ್ವದಲ್ಲಿ ಭಾಷಾ ನೀತಿ ರಚನೆಗೆ ಪ್ರಾಧಿಕಾರವು ಮುಂದಾಗಿದ್ದು, ಶೀಘ್ರದಲ್ಲಿಯೇ ಸಮಿತಿಯು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಿದೆ ಎಂದೂ ಅವರು ಹೇಳಿದ್ದಾರೆ.