ಬೆಂಗಳೂರು: ಪಕ್ಷದ ಪ್ರಸ್ತುತ ರಾಜಕೀಯ ಹಿತದೃಷ್ಟಿ ಹಾಗೂ ಕ್ಷೇತ್ರದ ದೃಷ್ಟಿಯಿಂದ ಪುತ್ರ ಭರತ್‌ಗೆ ಟಿಕೆಟ್ ನೀಡುವ ನಿರ್ಧಾರ ಕೈಗೊಂಡಿರುವುದಾಗಿ ಹೈಕಮಾಂಡ್ ನಾಯಕರು ತಿಳಿಸಿ ದ್ದಾರೆ. ಪಕ್ಷದ ನಿರ್ಧಾರಕ್ಕೆ ತಲೆ ಬಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ದಿನ ಸಮಯ ಕೇಳಿದ್ದೆ, ಸಮಯ ಕೊಡದೇ ಘೋಷಣೆ ಮಾಡಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನನಗೆ ಮಾತನಾಡಲು ಅವಕಾಶವೇ ನೀಡಲಿಲ್ಲ. ನಿಮ್ಮ ಮಗನಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದೇವೆ. ಮನಸಲ್ಲಿ ಏನೇ ಇದ್ದರೂ ಪಕ್ಷಕ್ಕಾಗಿ, ಸಮಾಜಕ್ಕಾಗಿ, ಕಾರ್ಯಕರ್ತರಿಗಾಗಿ ಪಕ್ಷದ ತೀರ್ಮಾನಕ್ಕೆ ತಲೆ ಬಾಗುತ್ತೇನೆ ಎಂದರು. ಅಲ್ಲಿ ನಿಮಗೆ ಹೆಸರಿದೆ ಮತ್ತು ಗೆಲುವು ಮುಖ್ಯ. ಸರ್ವೆ ವರದಿ ಕೂಡ ಭರತ್ ಪರ ಇದೆ ಎಂಬ ಮಾತನ್ನು ನಡ್ಡಾ ಅವರು ಹೇಳಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ದೂರವಾಣಿ ಮೂಲಕ ಮಾತನಾಡಿ ಚುನಾವಣೆ ಎದುರಿಸಬೇಕು, ಚುನಾವಣೆ ಗೆಲ್ಲಬೇಕು ಎಂದರು. ಹೀಗಾಗಿ ನಾನು ವರಿಷ್ಠರ ನಿರ್ಧಾರಕ್ಕೆ ತಲೆಬಾಗಿದ್ದೇನೆ. ನಂಗೆ ಈ ಬಾರಿ ಭರತ್‌ಗೆ ಟಿಕೆಟ್ ನೀಡುವುದು ಬೇಡ ಎಂಬ ನಿಲುವು ಇತ್ತು. ಆದರೆ ಪಕ್ಷ ನಂಬಿಕೆ ಇಟ್ಟು ಅವಕಾಶ ಕೊಟ್ಟಿದೆ. ನಾನು ಏನೇ ಆಗಿದ್ದರೂ ಅದಕ್ಕೆ ಪಕ್ಷ ಕಾರಣ. ಪಕ್ಷ ತೀರ್ಮಾನ ಮಾಡಿರುವಾಗ ಒಪ್ಪಿದೆ ಎಂದರು.


