ಹುಕ್ಕೇರಿ: ಇ.ಡಿ. ದಾಳಿಗೂ ಸಿಎಂಗೂ ಸಂಬಂಧ ವಿಲ್ಲ, ಸಿಎಂ ಸಿದ್ದರಾಮಯ್ಯ ಮೇಲೆ ಇ.ಡಿ. ದಾಳಿ ಮಾಡಿಲ್ಲ.ಮುಡಾ ಮೇಲೆ ದಾಳಿಯಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟವಾಗಿ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ. ದಾಳಿ ವೇಳೆ ಮುಡಾ ಕಚೇರಿಯಲ್ಲಿ ಕಡತಗಳು ನಾಪತ್ತೆ ವಿಚಾರಕ್ಕೆ ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಇ.ಡಿ.ಯವರು ವಿಚಾರಣೆ ಮಾಡುತ್ತಿದ್ದಾರೆ. ಅವರು ಏನೂ ಬೇಕೋ ಅದನ್ನು ತನಿಖೆ ಮಾಡುತ್ತಾರೆ. ಎಲ್ಲ ದಾಖಲೆಗಳು ಸರಕಾರದಲ್ಲಿ ಇರುತ್ತವೆ. ಯಾವ ದಾಖಲೆಗಳು ಎಲ್ಲಿ ಹೋಗಲೂ ಅವಕಾಶವಿಲ್ಲ ಎಂದರು.
ಸಚಿವ ಭೈರತಿ ಸುರೇಶ ಕಡತಗಳನ್ನು ನಾಶ ಮಾಡಿದ್ದಾರೆ ಎನ್ನುವ ಎಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಉತ್ತರಿಸಿದ ಜಾರಕಿಹೊಳಿ, ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಅದೂ ಸಾಬೀತಾಗಬೇಕು. ಅದು ಇ.ಡಿ. ತನಿಖೆಯಿಂದ ಗೊತ್ತಾಗುತ್ತೆ. ತನಿಖೆವರೆಗೂ ಕಾಯ್ದು ನೋಡೋಣ, ಅವಸರ ಇಲ್ಲ ಎಂದರು.