ಮಂಡ್ಯದ ಪಾಂಡವಪುರದಲ್ಲಿ ಶೂ ಧರಿಸಿಕೊಂಡೇ ಪೊಲೀಸರು ಆರ್‌ಎಸ್‌ಎಸ್ ಕಚೇರಿಗೆ ನುಗ್ಗಿದ್ದಾರೆ. ನಾವು ಕಚೇರಿಯನ್ನೂ ದೇವಾಲಯ ಎಂದೇ ಭಾವಿಸುತ್ತೇವೆ. ನಮ್ಮ ಭಾವನೆಗೆ ಧಕ್ಕೆಯಾಗಿದೆ. ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಕಾರ್ಯಕರ್ತರು ಪಾಂಡವಪುರದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.

ಮಂಡ್ಯ, ಸೆಪ್ಟೆಂಬರ್ 16: ಮಂಡ್ಯ ಜಿಲ್ಲೆಯ ಪಾಂಡವಪುರ ಆರ್‌ಎಸ್‌ಎಸ್ ಕಚೇರಿಗೆ ಪೊಲೀಸರು ದಾಳಿ ಮಾಡಿದ್ದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪೊಲೀಸರು ಆರ್‌ಎಸ್‌ಎಸ್ ಕಚೇರಿಗೆ ದಾಳಿ ಮಾಡಿದ್ದಷ್ಟೇ ಅಲ್ಲದೆ, ಶೂ ಹಾಕಿಕೊಂಡೇ ಕಚೇರಿ ಒಳ ಪ್ರವೇಶಿಸಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಕಾರ್ಯಕರ್ತರು, ಡಿವೈಎಸ್‌ಪಿ ಹಾಗೂ ಇನ್ಸ್ಪೆಕ್ಟರ್ ಇಬ್ಬರನ್ನು ಸಸ್ಪೆಂಡ್ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಪಾಂಡವಪುರದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ನಿನ್ನೆ ಪಾಂಡವಪುರದ ಆರ್‌ಎಸ್‌ಎಸ್ ಕಚೇರಿಗೆ ಬಜರಂಗದಳ, ವಿಹೆಚ್ಪಿ ಮುಖಂಡರ ಬಂಧನಕ್ಕೆ ತೆರಳಿದ್ದ ಪೊಲೀಸರು ಶೂ ಧರಿಸಿಕೊಂಡೇ ಕಚೇರಿಯಲ್ಲಿ ಓಡಾಡಿದ್ದಾರೆ. ನಾವು ನಮ್ಮ ಕಚೇರಿಯನ್ನು ದೇವಸ್ಥಾನ ಎಂದುಕೊಂಡಿದ್ದೇವೆ. ನಮ್ಮ ಭಾವನೆಗೆ ಧಕ್ಕೆ ತರುವ ಕೆಲಸವಾಗಿದೆ. ಡಿವೈಎಸ್‌ಪಿ ಹಾಗೂ ಇನ್ಸ್ಪೆಕ್ಟರ್ ಇಬ್ಬರನ್ನು ಸಸ್ಪೆಂಡ್ ಮಾಡಬೇಕೆಂದು ಆಗ್ರಹಿಸಿದ್ದಾರೆ.


