ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಮೊದಲ ಪದಕ ಗೆದ್ದುಕೊಟ್ಟ ಶೂಟರ್ ಮನು ಭಾಕರ್ ಮತ್ತೊಂದು ಪದಕ ಗೆಲ್ಲುವ ಸನಿಹದಲ್ಲಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ದೇಶಕ್ಕೆ ಕಂಚಿನ ಪದಕ ಗೆದ್ದುಕೊಟ್ಟ ಮನು ಭಾಕರ್ ಇದೀಗ ಮಿಶ್ರ ತಂಡ ಸ್ಪರ್ಧೆಯಲ್ಲೂ ಪದಕದ ನಿರೀಕ್ಷೆ ಮೂಡಿಸಿದ್ದಾರೆ. ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಮಿಶ್ರ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದ್ದು, ಇದೀಗ ಈ ಇಬ್ಬರೂ ಕಂಚಿನ ಪದಕಕ್ಕಾಗಿ ದಕ್ಷಿಣ ಕೊರಿಯಾದ ಶೂಟರ್‌ಗಳನ್ನು ಎದುರಿಸಲಿದ್ದಾರೆ. ಈ ಪಂದ್ಯ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.
ಮೂರನೇ ಸ್ಥಾನ ಪಡೆದ ಮಿಶ್ರ ತಂಡ
ಮನು ಭಾಕರ್ ಮತ್ತು ಸರಬ್ಜೋತ್ ಜೋಡಿ 580 ಅಂಕಗಳನ್ನು ಗಳಿಸಿದ್ದು, ಮೂರನೇ ಸ್ಥಾನ ಪಡೆದುಕೊಂಡಿದೆ. ಈ ಸ್ಪರ್ಧೆಯಲ್ಲಿ ಟರ್ಕಿ ತಂಡ 582 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಸೆರ್ಬಿಯಾ ತಂಡ 581 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಈಗ ಟರ್ಕಿ ಮತ್ತು ಸರ್ಬಿಯಾ ನಡುವೆ ಚಿನ್ನದ ಪದಕ್ಕಾಗಿ ಪೈಪೋಟಿ ನಡೆಯಲಿದೆ. ಗೆದ್ದ ತಂಡ ಚಿನ್ನ, ಸೋತ ತಂಡ ಬೆಳ್ಳಿ ಪದಕ ಪಡೆಯಲಿದೆ. ಉಳಿದಂತೆ ಕಂಚಿನ ಪದಕ್ಕಾಗಿ 580 ಅಂಕ ಸಂಪಾಧಿಸಿರುವ ಭಾರತ ಹಾಗೂ 579 ಅಂಕ ಸಂಪಾಧಿಸಿರುವ ಕೊರಿಯಾ ತಂಡದ ನಡುವೆ ಸ್ಪರ್ಧೆ ನಡೆಯಲ್ಲಿದೆ. ಭಾರತ ಮತ್ತು ಕೊರಿಯಾ ನಡುವಿನ ಪಂದ್ಯದಲ್ಲಿ ಗೆದ್ದ ತಂಡ ಕಂಚಿನ ಪದಕ ಪಡೆಯಲಿದ್ದು, ಸೋತ ತಂಡ ಹೊರಬೀಳಲಿದೆ.
ಕಂಚು ಗೆದ್ದಿದ್ದ ಮನು
ಭಾನುವಾರ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅದರಲ್ಲೂ ಬರೋಬ್ಬರಿ 12 ವರ್ಷಗಳ ನಂತರ ಶೂಟಿಂಗ್ ರೇಂಜ್‌ನಲ್ಲಿ ಭಾರತಕ್ಕೆ ಪದಕ ಗೆಲ್ಲಿಸಿಕೊಡುವುದರಲ್ಲಿ ಯಶಸ್ವಿಯಾದರು.
ನಿರಾಸೆ ಮೂಡಿಸಿದ ರಮಿತಾ ಜಿಂದಾಲ್
ಭಾರತದ ಮತ್ತೋರ್ವ ಶೂಟರ್ ರಮಿತಾ ಜಿಂದಾಲ್ ನಿರಾಸೆ ಮೂಡಿಸಿದರು. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯ ಫೈನಲ್‌ನಲ್ಲಿ 7ನೇ ಸ್ಥಾನ ಪಡೆದು ಸ್ಪರ್ಧೆಯಿಂದ ಹೊರಬಿದ್ದರು. 8 ಶೂಟರ್‌ಗಳು ಭಾಗವಹಿಸಿದ್ದ ಫೈನಲ್‌ನಲ್ಲಿ 20 ವರ್ಷದ ರಮಿತಾ 145.3 ಅಂಕ ಸಂಪಾಧಿಸಿ 7 ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಭಾನುವಾರ ನಡೆದ ಅರ್ಹತಾ ಸುತ್ತಿನಲ್ಲಿ ರಮಿತಾ ಐದನೇ ಸ್ಥಾನ ಪಡೆದಿದ್ದರು. ಹ್ಯಾಂಗ್ಝೌ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ರಮಿತಾ ಅವರು ದೇಶೀಯ ಟ್ರಯಲ್ಸ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತರಾದ ಮೆಹುಲಿ ಘೋಷ್ ಮತ್ತು ತಿಲೋತ್ತಮಾ ಸೇನ್ ಅವರನ್ನು ಸೋಲಿಸುವ ಮೂಲಕ ಪ್ಯಾರಿಸ್‌ಗೆ ಟಿಕೆಟ್ ಕಾಯ್ದಿರಿಸಿದ್ದರು. ಆದರೆ ಪದಕ ಗೆಲ್ಲುವ ಅವರ ಕನಸು ನನಸಾಗಲಿಲ್ಲ.


