ಬೆಂಗಳೂರು: ರಾಮ ಅಲ್ಲೇ ಇರ್ತಾನೆ, ರಾಮನಗರವೂ ಅಲ್ಲೇ ಇರುತ್ತೆ. ರಾಮನಗರ ಹೆಸರು ಬದಲಾವಣೆ ಮಾಡಿರುವ ವಿಚಾರದಲ್ಲಿ ರಾಜಕೀಯದ ಪ್ರಶ್ನೆ ಇಲ್ಲ ಎಂತ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ರಾಮನಗರ ಅಲ್ಲೇ ಇರುತ್ತೆ ಎಲ್ಲಿಯೂ ಹೋಗಲ್ಲ. ರಾಮನೂ ರಾಮ ಅಲ್ಲೇ ಇರ್ತಾನೆ, ರಾಮನಗರವೂ ಅಲ್ಲೇ ಇರುತ್ತೆ. ಕುಮಾರಸ್ವಾಮಿಯವರು ಹೇಳಿಕೆ ಕೊಡ್ತಾರೆ. ಏನು ಮಾಡೋಕೆ ಆಗಲ್ಲ. ಇದನ್ನೆಲ್ಲಾ ಸರ್ಕಾರ ಎದುರಿಸಬೇಕು ಎದರಿಸುತ್ತೆ. ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಸರ್ಕಾರ ಮಾಡ್ತಿದೆ. ಇದರಲ್ಲಿ ರಾಜಕೀಯದ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ರಾಮನ ವಿರುದ್ಧವಾಗಿದೆ:
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿರುವ ವಿಚಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿ, ಇದು ರಾಮ ಮತ್ತು ರಾಮಮಂದಿರದ ಬಗ್ಗೆ ಅವರಿಗಿರುವ ಅಲರ್ಜಿಯನ್ನು ತೋರಿಸುತ್ತದೆ ಎಂದು ಲೇವಡಿ ಮಾಡಿದ್ದಾರೆ. ನಾವು ರಾಮಮಂದಿರವನ್ನು ನಿರ್ಮಿಸುವಾಗ ಅವರು ಇದನ್ನೇ ಮಾಡುತ್ತಿದ್ದರು. ರಾಮನಗರಕ್ಕೆ ಮರುನಾಮಕರಣ ಮಾಡುವ ನಿರ್ಧಾರ, ಕಾಂಗ್ರೆಸ್ ಮತ್ತು ಕಾಂಗ್ರೆಸ್ ಸರ್ಕಾರವು ರಾಮನ ವಿರುದ್ಧವಾಗಿದೆ ಎಂದು ಸಾಬೀತುಪಡಿಸಿದೆ. ವೋಟ್ ಬ್ಯಾಂಕ್ ರಾಜಕೀಯ ಮತ್ತು ದುರಾಸೆಗಾಗಿ ಯಾರೂ ಹೆಸರು ಬದಲಾಯಿಸಬಾರದು. ನಾವು ಇದನ್ನು ಖಂಡಿಸುತ್ತೇವೆ ಎಂದು ಗುಡುಗಿದ್ದಾರೆ.


