ಕೊಡಗು: ಇಡೀ ದೇಶಕ್ಕೆ ದೇಶವೇ ಬರ ಹಾಗೂ ಬಿಸಿಲಿನ ತಾಪದಿಂದ ತತ್ತರಿಸುತ್ತಿದೆ. ಇದಕ್ಕೆ ಪರಿಸರ ನಾಶವೂ ಒಂದು ಕಾರಣ ಎನ್ನಲಾಗುತ್ತಿದೆ, ಪರಿಸ್ಥಿತಿ ಹೀಗಿರುವಾಗಲೇ ಕೊಡಗಿನಲ್ಲಿ ಅತ್ಯಮೂಲ್ಯ ಪಶ್ಚಿಮ ಘಟ್ಟಕ್ಕೆ ಭಾರೀ ಪ್ರಮಾಣದಲ್ಲಿ ಕೊಡಲಿ ಹಾಕಲಾಗಿದೆ.
ಸಾವಿರಕ್ಕೂ ಅಧಿಕ ಮರಗಳನ್ನ ಕಡಿದು ನಾಶ ಮಾಡಿರುವುದೂ ಅಲ್ಲದೆ ಇಡೀ ಕಾಡಿಗೆ ಬೆಂಕಿ ಹಚ್ಚಿ ಸಾಕ್ಷ್ಯ ನಾಶಕ್ಕೂ ಯತ್ನಿಸಲಾಗಿದೆ. ಮಡಿಕೇರಿ ತಾಲ್ಲೂಕಿನ ಕೇರಳ ಗಡಿಗ್ರಾಮ ಅಯ್ಯಂಗೇರಿಯ ದುರ್ಗಮ ಬೆಟ್ಟ ಪ್ರದೇಶದಲ್ಲಿ ಪ್ರಕೃತಿ ಮೇಲೆ ಘನಘೋರ ಅತ್ಯಾಚಾರ ನಡೆದಿದ್ದು, ಐದು ಏಕರೆ ಅರಣ್ಯವನ್ನ ಕಡಿದು ನಾಶ ಮಾಡಲಾಗಿದೆ. ಸಾವಿರಕ್ಕೂ ಅಧಿಕ ಮರಗಳನ್ನ ಕಡಿದ ಬಳಿಕ ಬೆಂಕಿ ಹಚ್ಚಿ ಸಾಕ್ಷ್ಯ ನಾಶಕ್ಕೂ ಯತ್ನಿಸಲಾಗಿದೆ.
ಈ ಅರಣ್ಯ ಮುಂಡ್ರೋಟು ಮೀಸಲು ಅರಣ್ಯಕ್ಕೆ ಸೇರಿದ್ದು, ತಲಕಾವೇರಿ ವನ್ಯಧಾಮದಿಂದ ಕೂಗಳತೆ ದೂರದಲ್ಲಿದೆ. ಯುನೆಸ್ಕೋ ವಿಶ್ವ ಪಾರಂಪರಿಕ ತಾಣದಲ್ಲಿ ಸ್ಥಾನ ಪಡೆದಿರುವ ಅತೀ ಸೂಕ್ಷ್ಮ ಪರಿಸರ ವಲಯದಲ್ಲೇ ಇಂತಹ ಘನಘೋರ ಕೃತ್ಯ ನಡೆದಿದೆ. ದುಷ್ಕರ್ಮಿಗಳು ಬೆಂಕಿ ಹಚ್ಚಿರುವುದರಿಂದ ಅತ್ಯಮೂಲ್ಯ ಸಸ್ಯ ಹಾಗೂ ಪ್ರಾಣಿ ಪ್ರಬೇಧವೂ ಇಲ್ಲಿ ನಷ್ಟಕ್ಕೊಳಗಾಗಿವೆ. ಇದು ಆನೆ ಕಾರಿಡಾರ್ ಆಗಿದ್ದು ಇಂತಹ ಸ್ಥಳದಲ್ಲೇ ವ್ಯಾಪಕ ಪರಿಸರ ನಾಶ ಮಾಡಲಾಗಿದೆ.
ಈ ಬೆಟ್ಟ ಪ್ರದೇಶಕ್ಕೆ ಕೊಡಗಿನ ಮೂಲಕ ತೆರಳಲು ರಸ್ತೆ ಇಲ್ಲ. ಗಡಿಗ್ರಾಮ ಕರಿಕೆಗೆ ತೆರಳಿ ಅಲ್ಲಿಂದ ಕೇರಳದ ಕಣ್ಣೂರಿನ ಮೂಲಕವೇ 140 ಕಿ.ಮಿ ಪ್ರಯಾಣಿಸಬೇಕಿದೆ. ಇದನ್ನೆ ಲಾಭವನ್ನಾಗಿಸಿಕೊಂಡ ಕೇರಳದ ಟಿಂಬರ್ ಮಾಫಿಯಾ, ಕೇರಳ ಬದಿಯಿಂದ ಆಗಮಿಸಿ ಅಪಾರ ಪ್ರಮಾಣದ ಅರಣ್ಯ ನಾಶ ಮಾಡಿದ್ದಾರೆ.
ಕಾಸರಗೋಡು ಮೂಲದ ಸನ್ನಿ ಮಲೆಬಾರಿ ಹಾಗೂ ಕಣ್ಣೂರಿನ ಅಬ್ರಾಹಂ ಎಂಬುವರು ಈ ದುಷ್ಕೃತ್ಯ ಎಸಗಿದ್ದಾರೆ. ಇವರ ವಿರುದ್ಧ ಅರಣ್ಯ ಇಲಾಖೆ ಕಾಟಚಾರಕ್ಕೆ ಪ್ರಕರಣ ದಾಖಲಿಸಿ ಕೈ ತೊಳೆದುಕೊಂಡಿದೆ ಈ ಅಕ್ರಮದಲ್ಲಿ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯೇ ಶಾಮೀಲಾಗಿರುವ ಶಂಕೆ ಇದೆ.
ವಿಚಿತ್ರ ಅಂದರೆ ಇಷ್ಟೊಂದು ಅಗಾಧ ಮಟ್ಟದಲ್ಲಿ ಪರಿಸರ ನಾಶ ಮಾಡಿದ್ರೂ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಗಳ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ಪ್ರದೇಶದಲ್ಲಿ 6 ಸಾವಿರಕ್ಕೂ ಅಧಿಕ ಸಸ್ಯ ಪ್ರಬೇಧ, 400 ಕ್ಕೂ ಅಧಿಕ ಪ್ರಾಣಿ ಹಾಗೂ ಪಕ್ಷಿ ಪ್ರಬೇಧವಿದೆ. ಇನ್ನು ನೂರಾರು ಬಗೆಯ ಸರೀಸೃಪಗಳು, ಸಸ್ತನಿಗಳು ಆಶ್ರಯ ಪಡೆದಿದೆ.
ನಿತ್ಯ ಹರಿದ್ವರ್ಣ ಕಾಡುಗಳನ್ನೇ ಈ ರೀತಿ ಕಡಿದು ಟಿಂಬರ್ ಮಾಫಿಯ ನಾಶ ಮಾಡಿರುವುದೂ ಜನ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮರ ಕಡಿದ ದುಷ್ಕರ್ಮಿಗಳು ಮಾತ್ರವಲ್ಲದೆ, ಅವರಿಗೆ ರಕ್ಷಣೆ ನೀಡುತ್ತಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.