ಧಾರವಾಡ: ರಾಹುಲ್ ಬಾಬಾ ಅಲ್ಲ ಅವರ ತಾತ-ಮುತ್ತಾತ ಬಂದ್ರೂ ಆರ್ಟಿಕಲ್ 370 ವಾಪಸ್ ತರಲಾಗಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸವಾಲು ಹಾಕಿದ್ದಾರೆ.
ಧಾರವಾಡದಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿ, ರಾಹುಲ್ ಗಾಂಧಿ ಯವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ಟಿಕಲ್ 370 ಯನ್ನು ವಾಪಸ್ ತರುತ್ತೇವೆ ಎಂದೇ ಘೋಷಿಸುತ್ತಿದ್ದಾರೆ. ಆದರೆ ಅದು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು. ,ರಾಹುಲ್ ಮೊದಲು ತಮ್ಮ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವ ಧೈರ್ಯ ತೋರಲಿ ಎಂದು ಜೋಶಿ ಸವಾಲೆಸೆದರು.
ಬಿಜೆಪಿ-NDA ಒಕ್ಕೂಟ ನಮ್ಮ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಎಂದು ಘೋಷಣೆ ಮಾಡಿಕೊಂಡಿದೆ . ಆದರೆ, ಕಾಂಗ್ರೆಸ್- ಇಂಡಿಯಾ ಕೂಟ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಿಸಲಿ ನೋಡೋಣ ಎಂದರು. ರಾಹುಲ್ ಬಾಬಾ ಮೇಲೆ ಇಂಡಿಯಾ ಕೂಟದ ಯಾರಿಗೂ ನಂಬಿಕೆಯಿಲ್ಲ. ಸ್ವತಃ ಕಾಂಗ್ರೆಸ್ಸಿಗರಿಗೇ ವಿಶ್ವಾಸವಿಲ್ಲ. NDA ಕೂಟದ ಸ್ಥಿತಿ ಇಂದು “ದಿಲ್ಲಿ ಮೇ ದೋಸ್ತಿ- ಕಲ್ಕತ್ತಾ ಮೇ ಕುಸ್ತಿ” ಎನ್ನುವಂತಿದೆ ಎಂದು ಜೋಶಿ ಲೇವಡಿ ಮಾಡಿದರು.
ದೇಶ ವಿರೋಧಿಗಳ ಜತೆ, ಪಿಎಫ್ಐನೊಂದಿಗೆ ಕಾಂಗ್ರೆಸ್ ನಂಟು ಬೆಳೆಸಿಕೊಂಡಿದೆ. ಕಾಂಗ್ರೆಸ್ ಧ್ವಜದಲ್ಲಿ ಕೇಸರಿ ಇರುವ ಕಾರಣಕ್ಕೆ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಕೇರಳದಲ್ಲಿ ಮುಸ್ಲಿಂ ಲೀಗ್ ಕಾಂಗ್ರೆಸ್ ಧ್ವಜ ಹಿಡಿದೇ ಹೋದರು. ಇದು ನಮ್ಮ ದೇಶದ ದುರ್ದೈವ ಎಂದು ಜೋಶಿ ಹೇಳಿದರು.
ಸಿಎಂ ಸಿದ್ದರಾಮಯ್ಯ ಅಕ್ಕ-ಪಕ್ಕದಲ್ಲಿ ಇರುವವರು ಹಿಂದೂ ಧರ್ಮವನ್ನು ಸಂಪೂರ್ಣ ನಿರ್ನಾಮ ಮಾಡುತ್ತೇವೆಂದು ಹೇಳಿದ್ದಾರೆ. ಒಟ್ಟಿನಲ್ಲಿ ಸುರಕ್ಷಿತ ಭಾರತ ನಿರ್ಮಾಣಕ್ಕಾಗಿ ಮೋದಿ ಸಂಕಲ್ಪ ತೊಟ್ಟಿದ್ದಾರೆ. ಇಂಥ ಒಬ್ಬ ಸಂತನನ್ನು ಮತ್ತೆ ಪ್ರಧಾನಿಯಾಗಿಸಲು ಬಿಜೆಪಿಎನ್ನು ಗೆಲ್ಲಿಸಿ ಎಂದು ಜೋಶಿ ಮನವಿ ಮಾಡಿದರು.


