ಬೆಂಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾರಿಗೆ ಸವಾರನೊಬ್ಬ ಬಲಿಯಾಗಿರುವಂತಹ ಘಟನೆ ಬೆಂಗಳೂರಿನ ಕೆ. ಆರ್ ಪುರಂ ಸಮೀಪದ ದೇವಸಂದ್ರ ವಿನಾಯಕ ದೇವಸ್ಥಾನ ಬಳಿ ನಡೆದಿದೆ. ಟಿಸಿ ಪಾಳ್ಯ ನಿವಾಸಿ ಪ್ರಕಾಶ್ (35) ಮೃತ ದುರ್ದೈವಿಯಾಗಿದ್ದಾರೆ.
ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಶೋಭಾ ಕರಂದ್ಲಾಜೆ ಲೋಕಸಭೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ರಸ್ತೆ ಬದಿ ನಿಂತಿದ್ದ ಕಾರಿನ ಡೋರ್ ತೆರೆಯುವಾಗ ಹಿಂಬದಿಯಿಂದ ಬೈಕ್‌ನಲ್ಲಿ ಬಂದ ಪ್ರಕಾಶ್ ಗುದ್ದಿ ಕೆಳೆಗೆ ಬಿದ್ದಿದ್ದಾರೆ. ರಸ್ತೆಗೆ ಬಿದ್ದ ಪ್ರಕಾಶ್ ಮೇಲೆ ಖಾಸಗಿ ಬಸ್ ಹರಿದಿದೆ. ಗಂಭೀರ ಗಾಯಗೊಂಡ ಪ್ರಕಾಶ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಪ್ರಕಾಶ್ ಮೃತಪಟ್ಟಿದ್ದಾರೆ.
ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಕೆ.ಆರ್. ಪುರಂ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆಆರ್ ಪುರಂ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಶೋಭಾ ಕರಂದ್ಲಾಜೆ, ಪ್ರಕಾಶ್ ಬಿಜೆಪಿ ಕಾರ್ಯಕರ್ತ. ಚುನಾವಣಾ ಪ್ರಚಾರದ ವೇಳೆ ರಸ್ತೆ ಬದಿ ಕಾರು ನಿಲ್ಲಿಸಲಾಗಿತ್ತು. ಕಾರಿನ ಡೋರ್ ತೆರೆಯುವಾಗ ಬೈಕ್‌ನಲ್ಲಿ ಬಂದು ಗುದ್ದಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿ ರಸ್ತೆ ಕೆಳಗೆ ಬಿದ್ದಿದ್ದು, ಹಿಂದಿನಿಂದ ಬಸ್ ಹರಿದಿದೆ. ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.
ಈ ಘಟನೆ ನಿಜಕ್ಕೂ ದುಃಖ ತಂದಿದೆ. ಅವರ ಕುಟುಂಬಸ್ಥರ ಜತೆಗೆ ನಾವಿದ್ದೇವೆ, ಪಾರ್ಟಿ ವತಿಯಿಂದ ಪರಿಹಾರ ಕೊಡುತ್ತೇವೆ ಎಂದರು. ಶೋಭಾ ಕರಂದ್ಲಾಜೆ, ಶಾಸಕ ಭೈರತಿ ಬಸವರಾಜು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಆದರೆ ಶೋಭಾ ಕರಂದ್ಲಾಜೆ ಅವರ ಕಾರಿಗೆ ಸರಿಯಾದ ದಾಖಲೆ ಆಧಾರ ಇಲ್ಲದಿರುವುದು ಸಹ ಕಂಡು ಬಂದಿದೆ.