ನವದೆಹಲಿ: ಯುವತಿಯರಿಬ್ಬರು ದೆಹಲಿ ಮೆಟ್ರೋ ರೈಲಿನಲ್ಲಿ ಹೋಳಿ ಆಚರಿಸುವ ನೆಪದಲ್ಲಿ ಅಸಭ್ಯವಾಗಿ ವರ್ತಿಸಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಬಿಳಿ ಬಣ್ಣದ ಬಟ್ಟೆ ಧರಿಸಿದ್ದ ಇಬ್ಬರು ಯುವತಿಯರು ದೆಹಲಿ ಮೆಟ್ರೋ ಏರಿದ ಸ್ವಲ್ಪ ಹೊತ್ತಿನಲ್ಲೇ ಹೋಳಿ ನೆಪದಲ್ಲಿ ಅಸಭ್ಯ ವರ್ತನೆ ತೋರಿದ್ದಾರೆ. ಪರಸ್ಪರ ಬಣ್ಣ ಹಚ್ಚಿಕೊಂಡು, ಮುದ್ದಾಡಿಕೊಂಡು, ರೊಮ್ಯಾಂಟಿಕ್ ಆಗಿ ಹೋಳಿ ಆಚರಿಸಿದ್ದಾರೆ. ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ನೆಟ್ಟಿಗರಿಂದ ಆಕ್ರೋಶವೂ ವ್ಯಕ್ತವಾಗಿದೆ.
ಇಬ್ಬರು ಯುವತಿಯರು ದೆಹಲಿ ಮೆಟ್ರೋ ಹತ್ತಿದ್ದಾರೆ. ರೈಲು ಚಲಿಸುತ್ತಲೇ ಕೆಳಗೆ ಕುಳಿತ ಅವರು ಪರಸ್ಪರ ಬಣ್ಣ ಹಚ್ಚಿಕೊಂಡಿದ್ದಾರೆ. ಆಕೆಯ ಕೆನ್ನೆಗೆ ಈಕೆ, ಈಕೆಯ ಕೆನ್ನೆಗೆ ಆಕೆ ಬಣ್ಣ ಹಚ್ಚುವುದು, ಇಬ್ಬರೂ ಮಲಗಿ ರೊಮ್ಯಾನ್ಸ್ ಮಾಡುವುದು, ಮುದ್ದಾಡುವುದು, ಮುತ್ತು ಕೊಡುವುದು ಸೇರಿ ಬಹಿರಂಗವಾಗಿಯೇ ಅಸಭ್ಯವಾಗಿ ವರ್ತಿಸಿದ್ದಾರೆ.
ಇತರ ಪ್ರಯಾಣಿಕರು ಏನೆಂದುಕೊಳ್ಳುತ್ತಾರೋ, ಅವರಿಗೆ ತೊಂದರೆಯಾಗುತ್ತದೆಯೋ ಎಂಬುದರ ಪರಿವೆಯೇ ಇಲ್ಲದೆ ಇಬ್ಬರು ಯುವತಿಯರು ಹುಚ್ಚಾಟ ಮೆರೆದು ರೀಲ್ಸ್ ಮಾಡಿದ್ದಾರೆ. ದೆಹಲಿಯಲ್ಲಿ ಸಂಚರಿಸುವ ಮೆಟ್ರೋ ರೈಲುಗಳು ಅಸಭ್ಯ ವರ್ತನೆ, ಜಗಳ, ರೊಮ್ಯಾನ್ಸ್ ಮಾಡುವ ತಾಣಗಳಾಗಿ ಬದಲಾಗಿವೆ.