ಬೆಂಗಳೂರು: ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿರುವ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ತಡೆಯೊಡ್ಡುವುದಾಗಿ ಹೇಳಿರುವುದು ಬೇಸರದ ಸಂಗತಿ. ಸಿಎಂ ಎಂ.ಕೆ. ಸ್ಟಾಲಿನ್ ಅವರ ನಡೆ ಖಂಡನಾರ್ಹ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಅಸಮಾಧಾನ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆ ಹಿನ್ನೆಲೆ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಬಿಡುಗಡೆ ಮಾಡಿರುವ ಪ್ರಣಾಳಿಕೆ ವಿಚಾರವಾಗಿ ಗುರುವಾರ ನಗರದಲ್ಲಿ ಸುದ್ದಿಗಾರರಿಗೆ ಮುಖ್ಯಮಂತ್ರಿ ಚಂದ್ರು ಪ್ರತಿಕ್ರಿಯಿಸಿದರು. ಮೇಕೆದಾಟು ಯೋಜನೆಯು ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ನಿರ್ಮಾಣ ಮಾಡಲಾಗುತ್ತಿದೆ. ಮೇಕೆದಾಟು ಪರಿಸರದಲ್ಲಿ ಜಲಾಶಯ ನಿರ್ಮಾಣ ಮಾಡಿ, ಮಳೆಗಾಲದ ಸಂದರ್ಭದಲ್ಲಿ ಸಮುದ್ರ ಪಾಲಾಗುವ 65-66 ಟಿಎಂಸಿ ಹೆಚ್ಚುವರಿ ನೀರನ್ನು ಸಂಗ್ರಹಿಸಬೇಕು ಎಂಬುದು ನಮ್ಮ ರಾಜ್ಯದ ಉದ್ದೇಶವಾಗಿದೆ ಎಂದು ಹೇಳಿದರು.
ಅಷ್ಟೇ ಅಲ್ಲದೆ, ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್ ಉತ್ಪಾದನೆಗೂ ಈ ಯೋಜನೆಯಿಂದ ಅನುಕೂಲವಾಗಲಿದೆ. ಇಂತಹ ಜನಪರ ಯೋಜನೆಗೆ ರಾಜಕೀಯ ಉದ್ದೇಶದಿಂದ ಡಿಎಂಕೆ ಅಡ್ಡಗಾಲು ಹಾಕುತ್ತಿದೆ. ಈ ವಿಚಾರವಾಗಿ ಸ್ಟಾಲಿನ್ ಅವರ ನಡೆ ಸರಿಯಲ್ಲ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು. ಒಂದೆಡೆ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕದ ವಿರುದ್ಧ ದ್ವೇಷ ರಾಜಕಾರಣ ನಡೆಸುತ್ತಿದೆ. ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಕಾನೂನು ಸಮ್ಮತಿ ಸಿಕ್ಕರೂ, ಕೇಂದ್ರ ಪರಿಸರ ಇಲಾಖೆ ಒಪ್ಪಿಗೆ ನೀಡದೆ ಸತಾಯಿಸುತ್ತಿದೆ ಎಂದು ಹೇಳಿದರು.
ಇಂತಹ ಸಂದರ್ಭದಲ್ಲಿ ಡಿಎಂಕೆ ಮಿತ್ರ ಪಕ್ಷವಾಗಿದ್ದುಕೊಂಡು ನಮ್ಮ ಆಶಯಕ್ಕೆ ತೊಡಕುಂಟು ಮಾಡುತ್ತಿರುವುದು ದುರಾದೃಷ್ಟಕರ. ಸ್ಟಾಲಿನ್ ಅವರಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಮೇಕೆದಾಟು ಯೋಜನೆ ನಮ್ಮ ರಾಜ್ಯದ ಹಕ್ಕು. ಸಾಮಾನ್ಯ ಸಂದರ್ಭಗಳಲ್ಲಿ ಕರ್ನಾಟಕವು ತಮಿಳುನಾಡಿಗೆ ಎಷ್ಟು ಟಿಎಂಸಿ ನೀರು ಬಿಡಬೇಕು ಎಂಬುವುದನ್ನು ಕಾವೇರಿ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದ್ದು, ಸಂಕಷ್ಟದ ವರ್ಷದಲ್ಲಿ ಸಂಗ್ರಹವಾದ ನೀರನ್ನು ನಾವು ಬಳಸಬಹುದಾಗಿದೆ ಎಂದರು.
ಪ್ರವಾಹ ಮತ್ತು ಸಂಕಷ್ಟದ ವರ್ಷಗಳಲ್ಲಿ ನೀರು ಬಳಕೆಗೆ ಇದು ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಚಂದ್ರು ಒತ್ತಿ ಹೇಳಿದರು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು ಇಂಡಿಯಾ ಒಕ್ಕೂಟದ ಮಿತ್ರ ಪಕ್ಷವಾಗಿರುವ ಡಿಎಂಕೆ ಪಕ್ಷಕ್ಕೆ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕಾಗಿದೆ ಹಾಗೂ ಯಾವುದೇ ಉಭಯ ರಾಜ್ಯಗಳ ನಡುವೆ ಗೊಂದಲಗಳಿಗೆ ಅವಕಾಶ ನೀಡದಂತೆ ಶೀಘ್ರ ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿ ಚಂದ್ರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.