ಸರ್ಕಾರಿ ಭೂಮಿಗೆ ಅಕ್ರಮ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರದಿಂದಲೇ ಪರಿಹಾರ ಪಡೆದಿರುವ ಬಗ್ಗೆ ಬೆಂಗಳೂರು ಪ್ರಾದೇಶಿಕ ಆಯುಕ್ತರಿಗೆ ದೂರೊಂದು ದಾಖಲಾಗಿದೆ. ದೇವನಹಳ್ಳಿ ತಹಶೀಲ್ದಾರ್ ಶಿವರಾಜ್ ಮತ್ತು ತಾಲೂಕು ಸರ್ವೆಯರ್ ಗಿರೀಶ್ ಹಾಗೂ ಇತರರರ ವಿರುದ್ಧ ದೂರು ದಾಖಲಾಗಿದೆ. ಸರ್ಕಾರಿ ಗೋಮಾಳಕ್ಕೆ ಅಕ್ರಮ ದಾಖಲೆಗಳನ್ನು ಸೃಷ್ಟಿಸಿ ನಾಲ್ಕುವರೆ ಕೋಟಿ ಪರಿಹಾರ ಕಬಳಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ಹರಳೂರು ಗ್ರಾಮದ ಸರ್ವೇ ನಂಬರ್ 37/21 ರಲ್ಲಿ ವೈಕೆ ಪುಟ್ಟಣ್ಣ ಎಂಬುವರಿಗೆ ಮೂರು ಎಕರೆ ಭೂಮಿ ಮಂಜೂರಾಗಿತ್ತು. ಆದರೆ ಗೋಮಾಳದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಸರ್ವೇ ನಂಬರ್ 37 ಬಿ5 ನಲ್ಲಿ ಎರಡು ಎಕರೆ ಕಬಳಿಸಿ ಅದಕ್ಕೆ ಕೆಐಎಡಿಬಿಯಿಂದ ಪರಿಹಾರ ಪಡೆಯಲಾಗಿದೆ. ವಿನುತ ಎಂಬುವರಿಗೆ ಈ ಪರಿಹಾರದ ಹಣ ನೀಡಲಾಗಿದ್ದು, ಇಡೀ ಕಡತವೇ ಬೋಗಸ್ ಆಗಿದೆ ಎಂದು ದಾಖಲೆಗಳ ಸಮೇತ ಮುರುಳೀಧರ ಎಂಬುವರು ದೂರು ನೀಡಿದ್ದಾರೆ.
ವೈಕೆ ಪುಟ್ಟಣ್ಣ ಈ ಜಮೀನು ಮಂಜೂರಾಗಿತ್ತು. ಅದನ್ನು ಅವರ ಕುಟುಂಬಸ್ಥರು ಮಾರಾಟ ಮಾಡಿದ್ದರು. ಈ ವೇಳೆ ಪೋಡಿ ಆಗಿ ಇದೇ ಜಮೀನಿಗೆ ಹೊಸ ಸರ್ವೇ ನಂಬರ್ 82 ನೀಡಲಾಗಿತ್ತು.ಈ ವೇಳೆ ಹಳೆಯ ಪಹಣಿ ಡಿಲೀಟ್ ಆಗಿರಲಿಲ್ಲ.ಇದನ್ನೇಆಧಾರವಾಗಿಟ್ಟುಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ನಾಲ್ಕುವರೆ ಕೋಟಿ ಹಣವನ್ನು ದೇವನಹಳ್ಳಿ ನಿವಾಸಿ ವಿನುತ ಎಂಬುವರಿಗೆ ನೀಡಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಕೆಐಎಡಿಬಿ ಸದರಿ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಾಗ ಸಂಬಂಧಪಟ್ಟ ಅಧಿಕಾರಿಗಳು ಈ ಜಮೀನಿಗೆ ಜೆಎಮ್ ಸಿ ಕಾರ್ಯ ಕೈಗೊಂಡಿದ್ದರು. ಕೆಐಎಡಿಬಿ ಸರ್ವೇ ಅಧಿಕಾರಿಗಳು ಮತ್ತು ತಾಲೂಕು ಭೂ ಮಾಪಕರು ಜಮೀನಿಗೆ ಎರಡು ಪಹಣಿ ಇರುವುದು ಗುರುತಿಸಿ ಸದರಿ ಜಮೀನನಲ್ಲಿ ವಿನುತಾ ಅವರ ಕುಟುಂಬ ಸ್ಪಾಧೀನದಲ್ಲಿ ಇರುವುದಿಲ್ಲವೆಂದು ಜೆಎಮ್ ಸಿಯಲ್ಲಿ ನಮೂದಿಸಿದ್ದಾರೆ. ವಿಎ, ಆರ್ ಐ ಸಹ ವಿನುತಾ ಕುಟುಂಬ ಸ್ವಾಧೀನದಲ್ಲಿ ಇಲ್ಲ ಎಂದು ವರದಿ ನೀಡಿದ್ದಾರೆ. ಈ ಭೂ ಅಕ್ರಮದ ಬಗ್ಗೆ ಹರಳೂರು ಗ್ರಾಮಸ್ಥರು ದೂರು ನೀಡಿದ್ದರು ಕ್ರಮ ಕೈಗೊಂಡಿಲ್ಲ. ಹಳೇ ಸರ್ವೇ ನಂಬರ್ 37 ಮತ್ತು ಹೊಸ ಸರ್ವೇ ನಂಬರು 82 ಎಂದು ಹೊಸ ಪೋಡಿ ನಂಬರ್ ಅನ್ನು 26 -1- 2005 ರಂದು ಭಾನುವಾರದ ದಿನ ಪಟ್ಟಪುಸ್ತಕದಲ್ಲಿ ನೂಮೂದಿಸಲಾಗಿದ್ದು, ಇವು ಅಕ್ರಮವಾಗಿ ಸೃಷ್ಟಿಸಿದ ದಾಖಲೆಗಳು ಎಂಬುದಕ್ಕೆ ಸಾಕ್ಷಿ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸರ್ವೇ ನಂಬರ್ 37 ಬ್ಲಾಕ್ 5ರಲ್ಲಿ ಒಟ್ಟು 2 ಎಕರೆ 35 ಗುಂಟೆ ಜಮೀನು ಇದೆ ಎಂದು ನಮೂದಾಗಿದ್ದು ಸದರಿ ಮ್ಯೂಟೇಶನ್ ಅಂಗೀಕರಿಸಲು ಎರಡೆರಡು ಬಾರಿ ತಹಶೀಲ್ಧಾರ್ ಸೀಲು ಬಿದ್ದಿರುವುದು ಬೋಗಸ್ ದಾಖಲೆ ಎಂಬುದಕ್ಕೆ ಸಾಕ್ಷಿಯಾಗಿದೆ.ಇವೆಲ್ಲಾ ನಕಲಿ ದಾಖಲೆಗಳ ಸೃಷ್ಟಿಗೆ ಕಾರಣಾಗಿರುವ ತಹಶೀಲ್ದಾರ್ ಶಿವರಾಜ್ ಹಾಗು ಭೂಮಾಪಕ ಗೀರಿಶ್ ಎಂಬುವರು ಸಹಾಯಕ ಭೂಮಾಪನ ಇಲಾಖಾ ನಿರ್ದೇಶಕರ ಗಮನಕ್ಕೆ ತಾರದೇ ವಿನುತಾ ಅವರ ಕುಟುಂಬಕ್ಕೆ ಲಾಭ ಮಾಡಿ ಕೊಟ್ಟಿದ್ದಾರೆ. ಕೂಡಲೇ ಪ್ರಾದೇಶಿಕ ಆಯುಕ್ತರು ತನಿಖೆ ನಡೆಸಿ ಸರ್ಕಾರಿ ಭೂಮಿ ಉಳಿಸಬೇಕು ಮತ್ತು ಸರ್ಕಾರದ ಬೊಕ್ಕಸಕ್ಕೆ ಹಣ ವಾಪಸ್ ಕಟ್ಟಿಸಬೇಕು ಎಂದು ಒತ್ತಾಯಿಸಲಾಗಿದೆ.