ರಾಜ್ಯ ಮುಜರಾಯಿ ದೇವಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸಚಿವ ರಾಮಲಿಂಗಾ ರೆಡ್ಡಿ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ. ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಕೆಲವು ಪ್ರಮುಖ ದೇವಾಲಯಗಳಲ್ಲಿ ಒಂದೇ ದೇವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ವೇತನ ತಾರತಮ್ಯವಿದ್ದು ನಿಯಮ 8 (2) ಅಡಿಯಲ್ಲಿ ವೇತನ ಶ್ರೇಣಿ ಪಡೆಯುತ್ತಿರುವ ನೌಕರರು ತಮಗೂ ಸಹ 6ನೇ ವೇತನ ಶ್ರೇಣಿಯನ್ನು ಮಂಜೂರು ಮಾಡಲು ಮುಜರಾಯಿ ಸಚಿವರಿಗೆ ಹಲವು ಬಾರಿ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ನೌಕರರಿಗೆ 6ನೇ ವೇತನ ಶ್ರೇಣಿಯನ್ನು ಮಂಜೂರು ಮಾಡುವ ಬಗ್ಗೆ ಐತಿಹಾಸಿಕ ಆದೇಶ ಇದೀಗ ಹೊರಬಿದ್ದಿದೆ.
ನೂತನ ಆದೇಶದ ಪ್ರಕಾರ ಮೂಲವೇತನದ ಶೇಕಡ 17 ರಷ್ಟು ಮಧ್ಯಂತರ ಪರಿಹಾರವನ್ನು ನಿಯಮಗಳಲ್ಲಿರುವಂತೆ, ಈಗಾಗಲೇ 6ನೇ ವೇತನ ಶ್ರೇಣಿ ಪಡೆಯುತ್ತಿರುವ ದೇವಾಲಯದ ನೌಕರರಿಗೆ ದೇವಾಲಯದ ಒಟ್ಟು ಸಿಬ್ಬಂದಿ ವೆಚ್ಚವು ದೇವಾಲಯದ ವಾರ್ಷಿಕ ಆದಾಯದ ಶೇಕಡ 35% ರಷ್ಟು ಮೀರದಿದ್ದಲ್ಲಿ ಮೇಲಿನ ಆದೇಶದಲ್ಲಿ ತಿಳಿಸಿರುವಂತೆ ಶೇಕಡ 17 ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಅನುಮತಿಸಿದೆ. ನೂತನ ಆದೇಶದಿಂದ ಮುಜರಾಯಿ ಇಲಾಖೆಯ ನೌಕರರಲ್ಲಿ ಇದ್ದ ವೇತನ ತಾರತಮ್ಯ ಸಮಸ್ಯೆ ನಿವಾರಣೆಯಾಗಿದೆ.