ಅತಿಥಿ ಉಪನ್ಯಾಸಕಿಯರಿಗೆ 90 ದಿನ ರಜೆ, ವಿದ್ಯಾರ್ಥಿನಿಯರಿಗೆ ಸ್ಕಾಲರ್‌ಶಿಪ್

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಮಹಿಳಾ ಅತಿಥಿ ಉಪನ್ಯಾಸಕಿಯರ ದಶಕಗಳ ಕಾಲದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ! ಇಷ್ಟು ದಿನ ಹೆರಿಗೆ ರಜೆಗಾಗಿ ಕೆಲಸವನ್ನೇ ಬಿಡಬೇಕಾದ ಅನಿವಾರ್ಯತೆಯಲ್ಲಿದ್ದ ಉಪನ್ಯಾಸಕಿಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 2026-27ರ ಬಜೆಟ್‌ನಲ್ಲಿ ಬಂಪರ್ ಗಿಫ್ಟ್ ನೀಡಿದ್ದಾರೆ.
ಇನ್ಮುಂದೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅತಿಥಿ ಉಪನ್ಯಾಸಕಿಯರಿಗೆ 90 ದಿನಗಳ ಕಾಲ ಮಾತೃತ್ವ ರಜೆ ಸೌಲಭ್ಯ ಸಿಗಲಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದಲೇ ಈ ನಿಯಮ ಜಾರಿಗೆ ಬರಲಿದ್ದು, ಇದರಿಂದ ಉದ್ಯೋಗ ಮತ್ತು ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸಲು ಸಾವಿರಾರು ಮಹಿಳೆಯರಿಗೆ ಶಕ್ತಿ ಸಿಕ್ಕಂತಾಗಿದೆ.
ವಿದ್ಯಾರ್ಥಿನಿಯರಿಗೂ ಸಿಎಂ ಸಿದ್ದರಾಮಯ್ಯ ಸಿಹಿ ಸುದ್ದಿ ನೀಡಿದ್ದಾರೆ. ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ವಿದ್ಯಾರ್ಥಿವೇತನದ ವ್ಯಾಪ್ತಿಗೆ ಬಾರದ ಉಳಿದ ವಿದ್ಯಾರ್ಥಿನಿಯರಿಗಾಗಿ ಸರ್ಕಾರ ಹೊಸದಾಗಿ ‘ದೀಪಿಕಾ ವಿದ್ಯಾರ್ಥಿ ವೇತನ ಯೋಜನೆಯನ್ನು ಘೋಷಿಸಿದೆ. ಇದರ ಅಡಿಯಲ್ಲಿ ಉನ್ನತ ಶಿಕ್ಷಣ ಪಡೆಯುವ ಹೆಣ್ಣುಮಕ್ಕಳಿಗೆ ಆರ್ಥಿಕ ಸಹಾಯ ಒದಗಿಸಿ, ಅವರ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಲ್ಲಲು ಸರ್ಕಾರ ಮುಂದಾಗಿದೆ.



