ಪಠಾಣ್ಕೋಟ್; ಪಂಜಾಬ್ನಲ್ಲಿ ಭಾರೀ ಅನಾಹುತವೊಂದು ತಪ್ಪಿದೆ. ಲೋಕೋ ಪೈಲಟ್ (Loco Pilot)ಇಲ್ಲದೇ ಗೂಡ್ಸ್ ರೈಲೊಂದು (Goods Train) ಹೆಚ್ಚು ಕಡಿಮೆ 70 ಕಿಲೋಮೀಟರ್ ಚಲಿಸಿದ ಘಟನೆ ಪಠಾಣ್ಕೋಟ್ ಸಮೀಪ ಸಂಭವಿಸಿದೆ. 53 ವ್ಯಾಗನ್ಗಳೊಂದಿಗೆ ಕೂಡಿದ್ದ ಈ ರೈಲು ಜಮ್ಮು ಕಾಶ್ಮೀರದಿಂದ ಪಂಜಾಬ್ನ ಗ್ರಾಮವೊಂದರವರೆಗೂ ಲೋಕೋ ಪೈಲಟ್ ಇಲ್ಲದೇ ಹಳಿ ಮೇಲೆ ಓಡಿದೆ. ಮಾರ್ಗಮಧ್ಯೆ ಈ ರೈಲಿನ ವೇಗ 100 ಕಿಲೋಮೀಟರ್ವರೆಗೂ ಇತ್ತು ಎಂಬುದು ಅಂದಾಜು. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಈಗ ಸಖತ್ ವೈರಲ್ ಆಗಿದೆ.
ಚಿಪ್ ಸ್ಟೋನ್ಗಳಿಂದ ಕೂಡಿದ 53 ವ್ಯಾಗನ್ಗಳ (Wagon)ಗೂಡ್ಸ್ ರೈಲು ಜಮ್ಮು ಕಾಶ್ಮೀರದಿಂದ ಪಂಜಾಬ್ ಕಡೆಗೆ ಹೊರಟಿತ್ತು. ಮಾರ್ಗಮಧ್ಯೆ ಲೋಕೋ ಪೈಲಟ್ ಬದಲಾವಣೆಗಾಗಿ ಕಥುವಾ ರೈಲು ನಿಲ್ದಾಣದಲ್ಲಿ ನಿಂತಿತ್ತು. ಹ್ಯಾಂಡ್ ಬ್ರೇಕ್ ಹಾಕದೇ ಲೋಕೋಪೈಲಟ್, ಅಸಿಸ್ಟೆಂಟ್ ಲೋಕೋಪೈಲಟ್ ರೈಲಿನಿಂದ ಇಳಿದು ಹೋಗಿದ್ದರು. ಹೀಗಾಗಿ ರೈಲು ಮೆಲ್ಲಗೆ ಚಲಿಸಲು ಆರಂಭಿಸಿತ್ತು. ಸ್ವಲ್ಪ ದೂರ ಚಲಿಸಿದ ಬಳಿಕ ಗೂಡ್ಸ್ ರೈಲು ವೇಗ ಪಡೆದುಕೊಂಡಿದೆ. ಹೀಗೆಯೇ ಅಂದಾಜು 78 ಕಿಲೋಮೀಟರ್ ಚಲಿಸಿದೆ.
ಸ್ವಲ್ಪ ಹೊತ್ತಿನ ನಂತರ ಆದ ಅವಾಂತರ ಅರಿತುಕೊಂಡ ರೈಲ್ವೇ ಅಧಿಕಾರಿಗಳು ಗೂಡ್ಸ್ ರೈಲನ್ನು ನಿಲ್ಲಿಸುವ ಪ್ರಯತ್ನ ಮಾಡಿದರು. ಕೊನೆಗೆ ಪಂಜಾಬ್ನ ಹೋಷಿಯಾರ್ಪುರ ಜಿಲ್ಲೆಯ ರೈಲು ನಿಲ್ದಾಣದಲ್ಲಿ ರೈಲು ನಿಂತ ಕಾರಣ ಎಲ್ಲರೂ ನಿಟ್ಟುಸಿರುಬಿಟ್ಟರು. ಮರಳಿನ ಚೀನ, ಮರದ ದಿಮ್ಮಿಗಳ ನೆರವಿನಿಂದ ರೈಲನ್ನು ರೈಲ್ವೇ ಸಿಬ್ಬಂದಿ ನಿಲ್ಲಿಸಿದರು ಎನ್ನಲಾಗಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರೈಲ್ವೇ ಇಲಾಖೆ ಇದೀಗ ತನಿಖೆಗೆ ಆದೇಶಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣ, ಆಸ್ತಿ ನಷ್ಟ ಆಗಿಲ್ಲ ಎಂದು ಜಮ್ಮು ಡಿವಿಷನಲ್ ಟ್ರಾಫಿಕ್ ಮ್ಯಾನೇಜರ್ ಪ್ರತೀಕ್ ಶ್ರೀವಾತ್ಸವ್ ಪ್ರಕಟಿಸಿದ್ದಾರೆ.