ನಾಗ್ಪುರ: ಪ್ರಧಾನಿ ನರೇಂದ್ರ ಮೋದಿ ಅವರು, ಮತ್ತೊಂದು ದಾಖಲೆ ಬರೆದಿದ್ದಾರೆ. ದೇಶದ ಯಾವ ಪ್ರಧಾನಿಯೂ ಮಾಡದ ಸಾಧನೆ ಮಾಡಿದ್ದಾರೆ. ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ಹೋದ ಮೊದಲ ಪ್ರಧಾನಿ ಎಂಬ ದಾಖಲೆ ಮಾಡಿದ್ದಾರೆ.1956ರಲ್ಲಿ ತಮ್ಮ ಅನುಯಾಯಿಗಳೊಂದಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ ನಾಗ್ಪುರದ ದೀಕ್ಷ ಭೂಮಿಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ, ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸಿದರು. ಅಭಿವೃದ್ಧಿ ಹೊಂದಿದ ಮತ್ತು ಎಲ್ಲರನ್ನೂ ಒಳಗೊಂಡ ಭಾರತ ನಿರ್ಮಿಸುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ನೀಡುವ ನಿಜವಾದ ಗೌರವ ಎಂದು ಸ್ಮಾರಕದಲ್ಲಿರುವ ಸಂದರ್ಶಕರ ದಿನಚರಿಯಲ್ಲಿ ಬರೆದ ಸಂದೇಶದಲ್ಲಿ ಮೋದಿ ಹೇಳಿದರು. ಮಹಾರಾಷ್ಟ್ರದ ನಾಗಪುರ ನಗರದ ಡಾ.ಹೆಡಗೇವಾರ್ ಸ್ಮೃತಿ ಮಂದಿರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಕೆ.ಬಿ.ಹೆಡಗೇವಾರ್ ಮತ್ತು ಎರಡನೇ ಸರಸಂಘಚಾಲಕ ಎಂ.ಎಸ್.ಗೋಲ್ವಾಲ್ಕರ್ ಅವರಿಗೆ ಗೌರವ ಸಲ್ಲಿಸಿದ ನಂತರ ಮೋದಿ ದೀಕ್ಷಭೂಮಿಯನ್ನು ತಲುಪಿದರು. ಅವರು ದೀಕ್ಷಭೂಮಿಯಲ್ಲಿರುವ ಸ್ತೂಪದ ಒಳಗೆ ಹೋಗಿ ಅಲ್ಲಿ ಇರಿಸಲಾಗಿರುವ ಅಂಬೇಡ್ಕರ್ ಅವರ ‘ಅಸ್ಥಿ’ಗೆ ಗೌರವ ಸಲ್ಲಿಸಿದರು.ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಇಬ್ಬರೂ ಭೇಟಿಯ ಸಮಯದಲ್ಲಿ ಉಪಸ್ಥಿತರಿದ್ದರು.