ಬೆಂಗಳೂರು: ಬೆಂಗಳೂರು ನಗರ ಜಿಲ್ಲಾಡಳಿತದಲ್ಲಿ ಮತ್ತೊಂದು ಬೃಹತ್ ಭೂ ಅಕ್ರಮ ನಡೆದಿರುವ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ಬೆಂಗಳೂರು ದಕ್ಷಿಣ ತಹಶೀಲ್ದಾರ್ ಶ್ರೀನಿವಾಸ್ ಹಾಗೂ ವಿಶೇಷ ತಹಶೀಲ್ದಾರ್ ನಾಗರಾಜ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಬರೋಬ್ಬರಿ 300 ಕೋಟಿ ಸರ್ಕಾರಿ ಜಮೀನು ಪರಭಾರೆ ಮಾಡಿರುವ ಕುರಿತು ಲೋಕಾಯುಕ್ತಕ್ಕೆ ದಾಖಲೆಗಳ ಸಮೇತ ದೂರು ದಾಖಲಾಗಿದೆ.
ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿ ದೊಡ್ಡ ತೋಗೂರು ಗ್ರಾಮದ ಸರ್ವೆ ನಂ 105 ರಲ್ಲಿ 7 ಎಕರೆ 20 ಗುಂಟೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡಲಾಗಿದೆ ಅಂತ ಆಘಾತಕಾರಿ ಅಂಶ ದೂರಿನಲ್ಲಿದೆ. ಮೂಲತಃ ಈ ಜಮೀನು ಸರ್ಕಾರಿ ಜಮೀನಾಗಿದ್ದು, ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಲಾಗಿದೆ ಎಂದು ಗೋಪಾಲ್ ಎಂಬುವರು ಲೋಕಾಯುಕ್ತಕ್ಕೆ ಕಂಪ್ಲೇಂಟ್ ನೀಡಿದ್ದಾರೆ.
ಈ ಸರ್ಕಾರಿ ಆಸ್ತಿ ಕಬಳಿಕೆಗಾಗಿ ಭೂಗಳ್ಳರ ಜೊತೆ ಅಧಿಕಾರಿಗಳು ವ್ಯವಸ್ಥಿತವಾಗಿ ಶಾಮೀಲಾಗಿದ್ದಾರೆ. ಸರ್ವೆ ನಂ 105ರಲ್ಲಿ ಸರ್ಕಾರಿ ಹೆಸರಿನಲ್ಲಿದ್ದ 7 ಎಕರೆ 20 ಗುಂಟೆ ಜಮೀನನ್ನ ಮರಿಯಪ್ಪ ಹೆಸರಿಗೆ 4 ಎಕರೆ, ಚಂಗಪ್ಪ ಹೆಸರಿಗೆ 1 ಎಕರೆ 20 ಗುಂಟೆ ಮತ್ತು ಗಂಗಪ್ಪ ಎನ್ನುವವರ ಹೆಸರಿಗೆ 2 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಲೋಕಾಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಈ ಪರಭಾರೆ ಪ್ರಕ್ರಿಯೆ ನಡೆದಿದೆ. ಇದೇ ಜಮೀನಿನ ಬಗ್ಗೆ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ಇತ್ತು. (ಸಂಖ್ಯೆ ccc 999/2023 wa1013/2023), (ಆಫಿಲು ಪ್ರಕರಣ ಸಂಖ್ಯೆ RP108/2024) ಇತ್ತು. ಆದರೂ ಇದನ್ನು ಮರೆಮಾಚಿ ಮೇಲಿನ ವ್ಯಕ್ತಿಗಳಿಗೆ ಆರ್ಟಿಸಿ ಮಾಡಿಕೊಡಲಾಗಿದೆ.
ಈ ಹಗರಣದಲ್ಲಿ ಭೂಕಬಳಿಕೆಗೆ ವ್ಯವಸ್ಥಿತ ಪಿತೂರಿ ನಡೆದಿದೆ. ಅಧಿಕಾರಿಗಳು ಮತ್ತು ಮರಿಯಪ್ಪ, ಗಂಗಪ್ಪ, ಚಂಗಪ್ಪ ಹಾಗೂ ರಾಷ್ಟ್ರಕೂಟ ಬಿಲ್ಡರ್ಸ್ರವರು ಸೇರಿ ರಾಜರಾಜೇಶ್ವರಿ ನಗರದ ಸಬ್ ರಿಜಿಸ್ಟ್ರಾರ್ ಜೊತೆ ಶಾಮೀಲಾಗಿ 7 ಎಕರೆ 20 ಗುಂಟೆ ಜಮೀನನ್ನು ಸರ್ಕಾರಿ ಬೆಲೆ ಒಟ್ಟು 15 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡು ಮುದ್ರಾಂಕ ಶುಲ್ಕ ಪಾವತಿಸಿದ್ದಾರೆ. ಅಡ್ವಾನ್ಸ್ ರೂಪದಲ್ಲಿ ಮರಿಯಪ್ಪ ಮತ್ತು ಇತರರು 2 ಕೋಟಿ 75 ಲಕ್ಷ ರೂಪಾಯಿಯನ್ನು ಆರ್ಟಿಜಿಎಸ್ ಮೂಲಕ ಪಡೆದಿದ್ದಾರೆ ಎಂದು ಇಸಿ ಮತ್ತು ರಿಜಿಸ್ಟ್ರಾರ್ ಪ್ರತಿಗಳನ್ನು ದೂರಿನೊಟ್ಟಿಗೆ ಸಲ್ಲಿಸಲಾಗಿದೆ.
ಮರಿಯಪ್ಪ ಅವರು ಸರ್ವೆ ನಂ.81 ವಿಟ್ಟಸಂದ್ರ ಗ್ರಾಮದ ರೈತರಿಗೆ ಹಂಚಿಕೆಯಾಗಿರುವ LNDSR 217/1978-79 ಗ್ರಾಂಟ್ ಆದೇಶದ ಪ್ರತಿಯನ್ನು ಫೋರ್ಜರಿ ಮಾಡಿ ಸರ್ಕಾರಿ ಜಮೀನಿನ ಸರ್ವೆ ನಂ 17ರ ಚಿಕ್ಕತೋಗೂರು ಗ್ರಾಮದಲ್ಲಿ 1.20 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಆರ್ಟಿಸಿ, ಸಾಗುವಳಿ ಚೀಟಿ ಸೃಷ್ಟಿಸಿ ಅಧಿಕಾರಿಗಳಿಗೆ ಭಾರಿ ಪ್ರಮಾಣದಲ್ಲಿ ಲಂಚ ನೀಡಿ ಬೆಂಗಳೂರು ದಕ್ಷಿಣ ಎಸಿ ಕೋರ್ಟ್ನಲ್ಲಿ ಆದೇಶ ಪಡೆದಿದ್ದಾರೆ ಎಂದು ದೂರಲಾಗಿದೆ.
ಈ ಬೃಹತ್ ಭೂ ಹಗರಣದ ದಾಖಲೆಗಳು ಫ್ರೀಡಂ ಟಿವಿಗೆ ಲಭ್ಯವಾಗಿದ್ದು, ಇದು ರಾಜ್ಯದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಗುವ ಸಾಧ್ಯತೆಗಳು ದಟ್ಟವಾಗಿವೆ.