ಬೆಂಗಳೂರು: ಕರ್ನಾಟಕ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 19.34 ಕೋಟಿ ರೂ. ಲೂಟಿ ಪ್ರಕರಣದಲ್ಲಿ ಸರ್ಕಾರದ ಮಹಾ ಮೌನ ಹಲವು ಅನುಮಾನಗಳಿಗೆ ಕಾರಣವಾಗಿದೆ. ಜತೆಗೆ ಹಗರಣದ ತನಿಖೆ ನಡೆಸಿ ವರದಿ ನೀಡುವ ಕೆಲಸ ಸಹ ಆಗಿಲ್ಲದಿರುವುದು ಅಚ್ಚರಿ ಮೂಡಿಸಿದೆ. ಡೂಪ್ಲಿಕೇಟ್ ಎಫ್ಡಿ ಸರ್ಟಿಫಿಕೇಟ್ ತೋರಿಸಿ ಹಣ ವರ್ಗಾಯಿಸಿಕೊಂಡಿರುವ ಸಂಬಂಧ ಸೊಸೈಟಿ ಯ ಉಸ್ತುವಾರಿ ಸಿಇಒ ಪಿ.ಆಶಾಲತಾ, ಇವರ ಪತಿ ಸೋಮಶೇಖರ್ ಹಾಗೂ ವಿಜಯ್ ಕಿರಣ್, ಮಂಜುನಾಥ್ ಜೆ, ಸುಜಯ್, ಬಿಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್ ಮ್ಯಾನೇಜರ್‌ಗಳು, ಕೆಎಸ್‌ಸಿಸಿಎಸ್‌ಎಫ್ ಆಡಿಟರ್‌ಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹಗರಣ ಜಗಜ್ಜಾಹೀರಾಗಿದ್ದರೂ ಸಹಾ ಬೋರ್ಡ್ ಅನ್ನು ಸೂಪರ್ ಸೀಡ್ ಮಾಡುವ ಕೆಲಸಕ್ಕೆ ಚಾಲನೆಯೇ ಸಿಕ್ಕಿಲ್ಲ. ಸೊಸೈಟಿ ವತಿಯಿಂದ ಎಫ್ ಐಆರ್ ಆಗಿದೆ. ಆದರೆ ಇಲಾಖೆ ವತಿಯಿಂದ ಯಾವುದೇ ದೂರು ದಾಖಲಾಗಿಲ್ಲದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇನ್ನು ಈ ಹಗರಣದಲ್ಲಿ ಹಲವು ದೊಡ್ಡವರ ಕೈವಾಡವಿದ್ದು, ಆಶಾಲತಾ ಹಾಗೂ ಕುಟುಂಬ ಬೇನಾಮಿಯಾಗಿ ಕೆಲಸ ಮಾಡಿದೆ ಎನ್ನಲಾಗ್ತಿದೆ. ಎಫ್ ಐಆರ್ ದಾಖಲಾಗುತ್ತಲೇ ಆಶಾಲತಾ ವಿದೇಶಕ್ಕೆ ಪರಾರಿಯಾಗಿದ್ದು, ನಮೀಬಿಯಾ, ಥಾಯ್ಲೆಂಡ್ ಸೇರಿ ವಿವಿಧ ದೇಶಗಳಲ್ಲಿ ಸಂಚರಿಸ್ತಿದ್ದಾರೆ. ಇವರನ್ನು ರಕ್ಷಿಸಲು ಇಲಾಖೆಯಲ್ಲಿ ವ್ಯವಸ್ಥಿತ ತಂತ್ರ ಹೆಣೆಯಲಾಗ್ತಿದೆ ಎಂಬ ಮಾತುಗಳು ಕೇಳಿಬರ್ತಿವೆ.

ಹಗರಣದ ಹಿನ್ನೆಲೆ: ಕರ್ನಾಟಕ ರಾಜ್ಯ ಕೋ-ಆಪರೇಟಿವ್ ಸೊಸೈಟಿ ಮಹಾಮಂಡಲ ನಿಗಮದ ಅಧ್ಯಕ್ಷ ರಾಜು ವಿ ನೀಡಿದ ದೂರಿನ ಆಧಾರದ ಮೇಲೆ ಸೊಸೈಟಿಯ ಉಸ್ತುವಾರಿ ಸಿಇಒ ಪಿ.ಆಶಾಲತಾ, ಇವರ ಪತಿ ಸೋಮಶೇಖರ್ ಹಾಗೂ ವಿಜಯ್ ಕಿರಣ್, ಮಂಜುನಾಥ್ ಜೆ, ಸುಜಯ್, ಬಿಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್ ಮ್ಯಾನೇಜರ್‌ಗಳು, ಕೆಎಸ್‌ಸಿಸಿಎಸ್‌ಎಫ್ ಆಡಿಟರ್‌ಗಳ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಕರ್ನಾಟಕ ರಾಜ್ಯ ಕೋ-ಆಪರೇಟಿವ್ ಸೊಸೈಟಿ ಮಹಾಮಂಡಲ ನಿಗಮದಲ್ಲಿ 2015 ಜ.5ರಂದು ಎಫ್‌ಡಿಎ ಹಾಗೂ ಅಕೌಂಟೆಂಟ್ ಆಗಿ ಆಶಾಲತಾರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿತ್ತು. 2018 ಮೇ 31ರಂದು ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಇವರನ್ನು ಉಸ್ತುವಾರಿ ಸಿಇಒ ಆಗಿ ನೇಮಕ ಮಾಡಲಾಗಿತ್ತು. ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳು ಇವರ ವಶದಲ್ಲಿಯೇ ಇದ್ದು, ಲೆಕ್ಕ ಪರಿಶೋಧಕರಿಗೆ ಲೆಕ್ಕ ಪತ್ರಗಳನ್ನು ಒದಗಿಸುತ್ತಿದ್ದರು. ಕಳೆದ ಅ.9ರಂದು ಸಹಕಾರಿ ಸಚಿವರು ನಡೆಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಆಶಾಲತಾ ಅವರು ಸೊಸೈಟಿಯ ಹಣವನ್ನು ಅಪೆಕ್ಸ್ ಸಹಕಾರಿ ಬ್ಯಾಂಕ್, ಬಿಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿ ಮಾಡಿರುವುದಾಗಿ ತಿಳಿಸಿದ್ದರು. ಸಭೆಯಲ್ಲಿ ಬಿಡಿಸಿಸಿ ಬ್ಯಾಂಕ್ ಎಂ.ಡಿ ಅವರು ಬಿಡಿಸಿಸಿ ಬ್ಯಾಂಕ್‌ನಲ್ಲಿ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಲ ನಿಯಮಿತದಿಂದ ಯಾವುದೇ ಠೇವಣಿಯನ್ನು ಮಾಡಿಲ್ಲವೆಂದು ತಿಳಿಸಿದ್ದರು. ನಂತರ ಆಶಾಲತಾ ಠೇವಣಿಯನ್ನಿಟ್ಟಿರುತ್ತೇವೆಂದು ಇದಕ್ಕೆ ಸಂಬಂಧಿಸಿದಂತೆ ಪಾಸ್‌ಬುಕ್‌ಗಳು ಮನೆಯಲ್ಲಿರುತ್ತವೆಂದು ತಿಳಿಸಿದ್ದರು. ನಂತರ ತನ್ನ ಗಂಡ ಮನೆಯ ಬೀಗ ಹಾಕಿಕೊಂಡು ಹೋಗಿರುತ್ತಾರೆ ಹಾಗೂ ಸಿಬ್ಬಂದಿ ರಜೆಯಲ್ಲಿರುವುದರಿಂದ ಸೋಮವಾರ ಕಚೇರಿಯಲ್ಲಿ ಇತ್ಯರ್ಥ ಪಡಿಸುತ್ತಾರೆಂದು ತಿಳಿಸಿದ್ದರು.
ಬಳಿಕ ಬ್ಯಾಂಕ್‌ನಲ್ಲಿದ್ದ 111 ಎಫ್ಡಿ ಖಾತೆಗಳ ಒಟ್ಟು 19.34 ಕೋಟಿ ರೂ. ನಕಲಿ ಠೇವಣಿ ಬಾಂಡ್‌ಗಳಿತ್ತು. ಕೆಲವು ನಿಶ್ಚಿತ ಠೇವಣಿಗಳನ್ನು ಆಶಾಲತಾ ಅವರೇ ಬರೆದಿದ್ದು, ಬ್ಯಾಂಕ್ ದೃಢೀಕರಣ ಪತ್ರಗಳನ್ನು ಅವರೇ ಖುದ್ದಾಗಿ ತಂದಿದ್ದು, ಲೆಕ್ಕ ಪರಿಶೋಧಕರಿಗೂ ನಕಲಿ ಪ್ರಮಾಣಪತ್ರ ನೀಡಿದ್ದಾರೆ. 2017ರಿಂದ ಬ್ಯಾಂಕಿನ ಸ್ಥಿರ ಠೇವಣಿಗಳ ಹಣವನ್ನು ತಮ್ಮ ಪತಿ ಸೋಮಶೇಖರ್ ಮತ್ತು ವಿಜಯ್ ಕಿರಣ್, ಮಂಜುನಾಥ್ ಜೆ, ಸುಜಯ್ ಅವರಿಗೆ ವರ್ಗಾವಣೆ ಮಾಡಿದ್ದಾರೆ. 2017 ರಿಂದ 2023 ರವರೆಗೆ ಮೂಲ ಸ್ಥಿರ ಠೇವಣಿ ವರ್ಗಾಯಿಸುವಾಗ ಅಧ್ಯಕ್ಷರ ನಕಲಿ ಸಹಿ ಹಾಕಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಅಲ್ಲದೇ ಮೂಲ ಎಫ್ಡಿ ಬಾಂಡ್‌ಗಳನ್ನು ಸಲ್ಲಿಸುವಾಗ ಕವರ್ ಲೆಟರ್‌ಗಳನ್ನು ಸಹಕಾರ ಪೆಡರೇಷನ್‌ನಲ್ಲಿ ಇಡಬೇಕಾಗಿದ್ದು, ಇದರಲ್ಲಿ ಅಧ್ಯಕ್ಷರು ಮತ್ತು ಸಿಇಒ ಇಬ್ಬರು ಸಹಿ ಮಾಡಬೇಕಾಗುತ್ತದೆ. ಆದರೆ, ಸಿಇಒ ಒಬ್ಬರೇ ಸಹಿ ಮಾಡಿ ಎಫ್ಡಿ ಮೊತ್ತವನ್ನು ಆಶಾಲತಾ ಅವರ ಪತಿಯ ವೈಯಕ್ತಿಕ ಖಾತೆಗೆ ಹಾಗೂ ವಿಜಯ್ ಕಿರಣ್, ಸುಜಯ್, ಮಂಜುನಾಥ್ ಖಾತೆಗೆ ವರ್ಗಾಹಿಸಿದ್ದರು” ಎಂದು ಎಫ್‌ಐಆರ್‌ನಲ್ಲಿದೆ.
ಫೆಡರೇಷನ್ ನಲ್ಲಿ ಇಂಥ ಹಲವು ಹಗರಣಗಳು ನಡೆದಿದ್ದು, ಸದ್ದಿಲ್ಲದೆ ಮುಚ್ಚಿ ಹಾಕಲಾಗ್ತಿದೆ. ಇಲಾಖೆ ಸಚಿವರು ಗಂಭೀರತೆ ಪ್ರದರ್ಶಿಸಿದರೆ ಹಲವರ ಮುಖವಾಡ ಬಯಲಾಗಲಿದೆ. ಹಲವು ಹಿರಿತಲೆಗಳು ದೊಡ್ಡಮಟ್ಟದಲ್ಲಿ ಪ್ರಭಾವ ಬೀರಿ ಮತ್ತು ಅಗತ್ಯವಿದ್ದಲ್ಲಿ ಹಣ ಕೊಟ್ಟು ತನಿಖೆ ನಡೆಯದಂತೆ ತಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಅಕ್ರಮದಲ್ಲಿ ಶಾಮೀಲಾಗಿರುವ ಡಿಸಿಸಿ ಬ್ಯಾಂಕ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆಯೇ ನಡೆಯುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಮೂವರು ಅಧ್ಯಕ್ಷರುಗಳ ಅವಧಿಯಲ್ಲಿ ಈ ಕರ್ಮಕಾಂಡ ನಡೆದಿದ್ದು, ಈ ಬಗ್ಗೆ ಪ್ರತಿಕ್ರಿಯೆಗೆ ಈ ಹಿಂದಿನ ಅಧ್ಯಕ್ಷರಾಗಿದ್ದ ಶ್ರೀಮತಿ ಲಲಿತಾ ಜಿ.ಟಿ.ದೇವೇಗೌಡ ಹಾಗೂ ಉಪಾಧ್ಯಕ್ಷ ಮಹೇಂದ್ರ ಪ್ರಸಾದ್ ಪ್ರತಿಕ್ರಿಯೆಗೆ ಸಿಕ್ಕಿಲ್ಲ.


