ಬೆಂಗಳೂರು: ಶಿವರಾತ್ರಿ ಪ್ರಯುಕ್ತ ಶಿವ ಭಕ್ತ ಸಮೂಹಕ್ಕೆಲ್ಲ ರಾಜ್ಯ ಸರ್ಕಾರ ಸಂತಸದ ಮಾಹಿತಿಯನ್ನು ಕೊಟ್ಟಿದೆ. ಆಸ್ತಿಕರೆಲ್ಲ ಮಹಾಶಿವರಾತ್ರಿಯನ್ನು ಮಹಾ ಉತ್ಸವವನ್ನಾಗಿ ಆಚರಿಸಲು ಅನುಕೂಲವಾಗುವಂತೆ ಆದೇಶವೊಂದನ್ನು ನೀಡಿದೆ. ರಾಜ್ಯದ ಮುಜರಾಯಿ ಇಲಾಖೆ ಅಡಿಯ ಸೂಚಿತ ಶಿವನ ದೇವಾಲಯಗಳಲ್ಲಿ ಅದ್ದೂರಿಯಿಂದ ಶಿವರಾತ್ರಿ ಆಚರಣೆಗೆ ಮುಜರಾಯಿ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಈ ಬಾರಿ ಭಕ್ತರಿಗೆಲ್ಲ ಭರ್ಜರಿ ಗಿಫ್ಟ್ ನೀಡಿದೆ. ಅಯೋಧ್ಯೆಯಲ್ಲಿ ಇತ್ತೀಚಿಗೆ ಶ್ರೀರಾಮ ಮಂದಿರದಲ್ಲಿ ರಾಮನಿಗೆ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ನಾಡಿನ ದೇಗುಲಗಳಲ್ಲಿ ವಿಶೇಷ ಪೂಜೆಗೆ ಸಚಿವ ರಾಮಲಿಂಗಾರೆಡ್ಡಿ ಆದೇಶಿಸಿದ್ದರು. ಈಗ ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಕರ್ನಾಟಕದ ಶಿವ ದೇಗುಲಗಳಲ್ಲಿ ಅದ್ದೂರಿ ಶಿವನೋತ್ಸವಕ್ಕೆ ಸಚಿವರು ಸೂಚನೆ ಮಾಡಿದ್ದಾರೆ. ಮುಜರಾಯಿ ಸಚಿವರ ನಿರ್ದೇಶನದಂತೆ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ರುದ್ರಾಭಿಷೇಕ, ರದ್ರ ಹೋಮ, ಪೂಜಾ ಕಾರ್ಯಗಳನ್ನು ವಿಶೇಷವಾಗಿ ಮಾಡಲು, , ಮರೆಯಾಗುತ್ತಿರುವ ಕಲೆಗಳಾದ ಗೊಂಬೆ ಆಟ, ಕೋಲಾಟ ಆಯೋಜಿಸಲು, ಯಕ್ಷಗಾನ, ವೀರಭದ್ರ ಕುಣಿತ, ಭರತ ನಾಟ್ಯ, ಡೊಳ್ಳು ಕುಣಿತಬಹಾಗೂ ಇನ್ನಿತರ ದೇಶಿಯ ಕಲೆಯ ಪ್ರದರ್ಶನವನ್ನು ಈ ವೇಳೆ ಆಯೋಜಿಸಲು ಸುತ್ತೋಲೆಯಲ್ಲಿ ತಿಳಿಸಲಾಗಿದೆ