ಮೈಸೂರು ; ನಾಳೆ ಮಹಾಶಿವರಾತ್ರಿ ಹಬ್ಬದ ಹಿನ್ನೆಲೆ ಮೈಸೂರು ಅರಮನೆ ಆವರಣದಲ್ಲಿರುವ ತ್ರಿನಯನೇಶ್ವರ ದೇವಸ್ಥಾನದಲ್ಲಿರುವ ಶಿವನಿಗೆ 11ಕೆಜಿ ತೂಕದ ಚಿನ್ನದ ಶಿವನ ಮುಖವಾಡದ ಕೊಳಗವನ್ನು ಧಾರಣೆ ಮಾಡಲು ಚಿನ್ನದ ಕೊಳಗವನ್ನು ಜಿಲ್ಲಾ ಖಜಾನೆಯಿಂದ ಇಂದು ದೇವಸ್ಥಾನಕ್ಕೆ ಹಸ್ತಾಂತರಿಸಲಾಯಿತು.
ಮೈಸೂರಿನ ಅಂಬಾವಿಲಾಸ ಅರಮನೆಯ ಆವರಣದಲ್ಲಿರುವ ತ್ರಿನಯನೇಶ್ವರ ದೇವಸ್ಥಾನದಲ್ಲಿರುವ ಶಿವನಿಗೆ ಮಹಾಶಿವರಾತ್ರಿ ಹಬ್ಬದಂದು ಬೆಳಗಿನ ಜಾವ ವಿಶೇಷ ಅಭಿಷೇಕ ಹಾಗೂ ಪೂಜೆ ಸಲ್ಲಿಸಲಾಗುತ್ತದೆ. ಈ ಸಂದರ್ಭದಲ್ಲಿ ಶಿವನಿಗೆ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ನೀಡಿರುವ 11 ಕೆಜಿ ತೂಕದ ಬಾಲ ಶಿವನ ಕೊಳವನ್ನ ತೊಡಿಸಲಾಗುವುದು. ನಂತರ ಶಿವರಾತ್ರಿ ಪೂಜೆಗಳು ನಡೆಯಲಿದೆ.
ಇಂದು ಪೊಲೀಸ್ ಭದ್ರತೆಯೊಂದಿಗೆ ಅರಮನೆಗೆ 11 ಕೆ.ಜಿ. ತೂಕದ ಅಪರಂಜಿ ಚಿನ್ನದ ಕೊಳಗ ಹಸ್ತಾಂತರ ಮಾಡಲಾಗಿದ್ದು, ನಾಳೆ ಬೆಳಗ್ಗೆ ತ್ರಿಯನೇಶ್ವರನಿಗೆ ಚಿನ್ನದ ಮುಖವಾಡ ಧಾರಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ವಿವಿಧ ಅಭಿಷೇಕದ ಜೊತೆಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿದೆ.
ಜಯಚಾಮರಾಜೇಂದ್ರ ಒಡೆಯರ್ ರವರು ತಮಗೆ ಪುತ್ರ ಸಂತಾನವಿಲ್ಲದ ಕಾರಣ ತ್ರಿಯನೇಶ್ವರನಿಗೆ ಹರಕೆ ಹೊತ್ತುಕೊಂಡು ತ್ರಿಯನೇಶ್ವರನಿಗೆ ಈ ಚಿನ್ನದ ಕೊಳಗ ಮಾಡಿಸಿದ್ದರು. ತ್ರಿಯನೇಶ್ವರನಲ್ಲಿ ಹರಕೆ ಹೊತ್ತುಕೊಂಡ ಬಳಿಕ ಜಯಚಾಮರಾಜೇಂದ್ರ ಒಡೆಯರ್ ರಿಗೆ ಶ್ರೀಕಂಠದತ್ತ ಚಾಮರಾಜ ಒಡೆಯರ್ ಜನಿಸಿದರು. ಆದ ಕಾರಣ ಯದುವಂಶದ ಅರಸರು ತ್ರಿಯನೇಶ್ವರನಿಗೆ ಮಹಾ ಶಿವರಾತ್ರಿಯಂದು ವಿಶೇಷ ಪೂಜೆ ಸಲ್ಲಿಸುತ್ತಾರೆ.
ಶಿವರಾತ್ರಿ ಹಬ್ಬ ಮುಗಿದ ಬಳಿಕ ಈ ಚಿನ್ನದ ಶಿವನ ಕೊಳಗವನ್ನು ಅರಮನೆಗೆ ವಾಪಸ್ ತಂದು ಅರಮನೆಯ ಖಜಾನೆಯಲ್ಲಿ ಇರಿಸಲಾಗುತ್ತದೆ. ಪ್ರತೀವರ್ಷ ಖಜಾನೆಯಿಂದ ಚಿನ್ನದ ಕೊಳಗವನ್ನ ತಂದು ಅರಮನೆ ಆವರಣದಲ್ಲಿರುವ ತ್ರಿಯನೇಶ್ವರನಿಗೆ ಧರಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.


