#Exclusive NewsTop Newsಫ್ರೀಡಂ ಟಿವಿ ವಿಶೇಷರಾಜ್ಯಸುದ್ದಿ

ವಿಶ್ವವಿಖ್ಯಾತ ಮೈಸೂರು ದಸರಾಗೆ ವೈಭವದ ಚಾಲನೆ

ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಉತ್ಸವಕ್ಕೆ ಮೈಸೂರು ಸಜ್ಜಾಗಿದ್ದು ಎಲ್ಲೆಡೆ ನವರಾತ್ರಿಯ ಸಂಭ್ರಮ, ಸಡಗರ ಕಳೆಕಟ್ಟಿದೆ. ಚಾಮುಂಡಿ ಬೆಟ್ಟದಲ್ಲಿ ಗುರುವಾರ 414ನೇ ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದೆ.
ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಬೆಳಗ್ಗೆ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆಯೊಂದಿಗೆ ಹಿರಿಯ ಸಾಹಿತಿ ನಾಡೋಜ ಡಾ| ಹಂಪ ನಾಗರಾಜಯ್ಯ ಅವರು ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ. ಈ ಮೂಲಕ 10 ದಿನ ನಡೆಯುವ ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಚ್.ಸಿ.ಮಹದೇವಪ್ಪ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಬೆಳ್ಳಿಯ ರಥದಲ್ಲಿ ನಾಡದೇವಿ ಪ್ರತಿಷ್ಠಾಪನೆ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಲಾಗುತ್ತದೆ. ಇದಕ್ಕಾಗಿ ದೇವಾಲಯದಲ್ಲಿದ್ದ ಬೆಳ್ಳಿ ರಥವನ್ನು ವೇದಿಕೆಯ ಮೇಲೆ ನಿಲ್ಲಿಸಲಾಗಿದೆ. ಬೆಟ್ಟದಲ್ಲಿ ದಸರಾಗೆ ಚಾಲನೆ ದೊರೆಯುತ್ತಿದ್ದಂತೆ ದಸರಾ ದೀಪಾಲಂಕಾರ, ಯುವ ದಸರಾ, ರೈತ ದಸರಾ, ಮಕ್ಕಳ ದಸರಾ, ದಸರಾ ವಸ್ತುಪ್ರದರ್ಶನ, ಆಹಾರ ಮೇಳ, ದಸರಾ ಕ್ರೀಡಾಕೂಟ, ದಸರಾ ಸಾಂಸ್ಕೃತಿಕ ಕಾರ್ಯಕ್ರಮ, ಫಲಪುಷ್ಪ ಪ್ರದರ್ಶನ ಸೇರಿದಂತೆ 20ಕ್ಕೂ ಹೆಚ್ಚು ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ವಿಜಯದಶಮಿಯಂದು 40ಕ್ಕೂ ಹೆಚ್ಚು ಸ್ತಬ್ಧಚಿತ್ರಗಳೊಂದಿಗೆ ಗಜಪಡೆಯಿಂದ ಜಂಬೂ ಸವಾರಿ ನಡೆಯಲಿದ್ದು, ರಾತ್ರಿ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ನಡೆಯಲಿದೆ. ಬೆಟ್ಟದಲ್ಲಿ ದೇವಿಗೆ ವಿಶೇಷ ಪೂಜೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಿಗೆ 10 ದಿನವೂ ವಿಶೇಷ ಅಲಂಕಾರ ಮಾಡಲಾಗುತ್ತದೆ. ಅ. 3ರಂದು ಬ್ರಹ್ಮ, 4ರಂದು ಮಹೇಶ್ವರಿ, 5ರಂದು ಕೌಮಾರಿ, 6ರಂದು ವೈಷ್ಣವಿ, 7ರಂದು ವಾರಾಹಿ, 8ರಂದು ಇಂದ್ರಾಣಿ, 9ರಂದು ಸಿದ್ಧಿ ಧಾತ್ರಿ, 10ರಂದು ಸರಸ್ವತಿ, 11ರಂದು ಮಹಾಲಕ್ಷ್ಮೀ ಹಾಗೂ 12ರಂದು ಅಶ್ವಾರೋಹಣ ಅಲಂಕಾರ ಮಾಡಲಾಗುತ್ತದೆ.

Comments (0)

Your email address will not be published. Required fields are marked *

Back to top button