ನವದೆಹಲಿ, ಮಾರ್ಚ್ 07:

“ಇಂದು ಸಂಜೆ ನಡೆಯುವ ಕಾಂಗ್ರೆಸ್ ಪಕ್ಷದ ಚುನಾವಣಾ ಸಮಿತಿ ಸಭೆಯಲ್ಲಿ ಶೇ.50 ರಷ್ಟು ರಾಜ್ಯದ ಅಭ್ಯರ್ಥಿಗಳ ಪಟ್ಟಿ ನಿರ್ಧಾರವಾಗಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರ ಪ್ರತಿಕ್ರಿಯಿಸಿದ ಶಿವಕುಮಾರ್
“ಇಂದು ಸಂಜೆ‌ ನಡೆಯುವ ಸಭೆಗೆ ಮುಖ್ಯಮಂತ್ರಿಗಳು ಆಗಮಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ., ಇಂದು ಬಸವ ಕಲ್ಯಾಣದಲ್ಲಿ ಬೃಹತ್ ಕಾರ್ಯಕ್ರಮ ನಿಯೋಜಿಸಲಾಗಿದೆ. ಆ ಕಾರ್ಯಕ್ರಮದಲ್ಲಿ ಎಲ್ಲಾ ಮಠಾಧೀಶರು ಭಾಗವಹಿಸುತ್ತಿದ್ದಾರೆ. ಹೀಗಾಗಿ ಇದನ್ನು ಮುಂದೂಡಲು ಸಾಧ್ಯವಿಲ್ಲ. ಇದು ಅದ್ಯತೆಯ ಕಾರ್ಯಕ್ರಮವಾದ್ದರಿಂದ ಸಿಎಂ ಅದರಲ್ಲಿ ಭಾಗವಹಿಸುತ್ತಿದ್ದಾರೆ. ನಾವುಗಳು ಸೇರಿ ಈಗಾಗಲೇ ಚರ್ಚೆ ಮಾಡಿರುವುದನ್ನು ನಾನು ಈ ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ.”

ರಾಜ್ಯದ 28 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಪಟ್ಟಿ ಬಿಡುಗಡೆ ಮಾಡುತ್ತೀರಾ ಎಂದು ಕೇಳಿದಾಗ, “ಒಂದೇ ಹಂತದಲ್ಲಿ ಪಟ್ಟಿ ಬಿಡುಗಡೆ ಮಾಡಲು ಆಗುವುದಿಲ್ಲ. ಒಂದೆರಡು ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡುತ್ತೇವೆ” ಎಂದು ತಿಳಿಸಿದರು.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ನೋಡಿಕೊಂಡು ನೀವು ಅಭ್ಯರ್ಥಿಗಳ ಆಯ್ಕೆ ಮಾಡುತ್ತೀರಾ ಎಂದು ಕೇಳಿದಾಗ, “ಅವರ ರಾಜಕಾರಣಕ್ಕೂ ನಮ್ಮ ರಾಜಕಾರಣಕ್ಕೂ ಬಹಳ ವ್ಯತ್ಯಾಸವಿದೆ. ನಮ್ಮ ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿ ಮೇಲೆ ರಾಜಕಾರಣ ನಡೆಯುವುದಿಲ್ಲ. ಪಕ್ಷ, ನಮ್ಮ ಗ್ಯಾರಂಟಿ ಯೋಜನೆಗಳ ಮೇಲೆ ನಾವು ರಾಜಕೀಯ ಮಾಡುತ್ತೇವೆ. ಅವರು ಅವರದೇ ಆದ ಲೆಕ್ಕಾಚಾರ ಇಟ್ಟುಕೊಂಡಿದ್ದರೆ, ನಾವು ನಮ್ಮದೇ ಲೆಕ್ಕಾಚಾರ ಇಟ್ಟುಕೊಂಡಿದ್ದೇವೆ” ಎಂದು ತಿಳಿಸಿದರು.

ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಯಾದವರಿಗೆ ಟಿಕೆಟ್ ನೀಡುತ್ತೀರಾ, ಸಚಿವರು ಕೂಡ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರಾ ಎಂದು ಕೇಳಿದಾಗ, “ರಾಜಕೀಯದಲ್ಲಿ ಎಲ್ಲಾ ಸಾಧ್ಯತೆಗಳೂ ಇರುತ್ತವೆ” ಎಂದು ತಿಳಿಸಿದರು.

ಮುಂಚಿತವಾಗಿ ಅಭ್ಯರ್ಥಿ ಆಯ್ಕೆ ಮಾಡಬಹುದಿತ್ತಲ್ಲವೇ ಎಂದು ಕೇಳಿದಾಗ, “ನಾವು ಈಗಾಗಲೇ ಒಂದು ತಿಂಗಳ ಹಿಂದೆಯೇ ಚರ್ಚೆ ಮಾಡಿ, ಯಾರಿಗೆ ಯಾವ ಕಿವಿಮಾತು ಹೇಳಬೇಕೋ ಹೇಳಿದ್ದೇವೆ” ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ನಿಮಗೆ ರಿಲೀಫ್ ನೀಡಿದ್ದು, ನೊಟೀಸ್ ಬರುತ್ತಿಲ್ಲವೇ ಎಂದು ಕೇಳಿದಾಗ, “ಇನ್ನೂ ನೊಟೀಸ್ ಬರುತ್ತಿವೆ. ಮಾಧ್ಯಮಗಳು ಹಗಲು ರಾತ್ರಿ ನನ್ನನ್ನು ಕಾಯುತ್ತಾ ಕೆಲಸ ಮಾಡಿವೆ ಹೆರಿಗೆ ನೋವು ಅನುಭವಿಸಿದವರಿಗೆ ಗೊತ್ತು ಎಂಬಂತೆ, ನನ್ನ ನೋವು ನನಗೆ ಗೊತ್ತು. ರಾಜ್ಯದ ಜನ ನನ್ನ ಪರವಾಗಿ ಹೋರಾಟ ಮಾಡಿದರು. ಪ್ರಾರ್ಥನೆ ಮಾಡಿದರು. ಈಗ ಅವರಿಗೆ ಸಮಾಧಾನ ಆಗಿದೆಯಲ್ಲ ಅಷ್ಟೇ ಸಾಕು” ಎಂದು ತಿಳಿಸಿದರು.

By admin

Leave a Reply

Your email address will not be published. Required fields are marked *

Verified by MonsterInsights