ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ವಿಜಯನಗರ ಜಿಲ್ಲೆಯ ಸಂಜನಾಬಾಯಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, 600ಕ್ಕೆ 597 ಅಂಕ ಪಡೆಯುವ ಮೂಲಕ ಸಂಜನಾಬಾಯಿ ಕಲಾ ವಿಭಾಗದಲ್ಲಿ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಇಂದು ಪಿಯು ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದ ಸಂಜನಾಬಾಯಿ ಲಾರಿ ಡ್ರೈವರ್ ಮಗಳು ಅನ್ನೋದು ವಿಶೇಷವಾಗಿದೆ.
ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಂಜನಾ ಬಾಯಿ ಅವರ ತಂದೆ ಲಾರಿ ಡ್ರೈವರ್ ಆಗಿದ್ದು, ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯ ಗುಂಡಾ ಸ್ಟೇಷನ್ ಗ್ರಾಮದ ನಿವಾಸಿಯಾಗಿರುವ ಸಂಜನಾಬಾಯಿ ಅವರ ತಂದೆ ತನ್ನ ಮಗಳನ್ನು ಡ್ರೈವರ್ ಆಗಿ ದುಡಿದು ಚೆನ್ನಾಗಿ ಓದಿಸಿದ್ದಾರೆ. ಮಗಳು ಕೂಡ ಕಷ್ಟ ಪಟ್ಟು ಓದಿದ್ದರಿಂದ ಇಂದು ರಾಜ್ಯಕ್ಕೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.
ಇನ್ನು ವಿಜಯನಗರ ಜಿಲ್ಲೆಯ ಕೆ ನಿರ್ಮಲಾ ಕೂಡ ರಾಜ್ಯಕ್ಕೆ ದ್ವಿತಿಯ ಸ್ಥಾನ ಪಡೆದಿದ್ದಾರೆ. ವಿಜಯನಗರ ಜಿಲ್ಲೆಯ ಇಟಗಿಯ ಪಂಚಮಸಾಲಿ ಪಿಯು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ನಿರ್ಮಲಾ ಅವರು 600ಕ್ಕೆ 596 ಅಂಕ ಪಡೆದು ಒಂದು ಅಂಕ ಕಡಿಮೆ ಪಡೆಯುವ ಮೂಲಕ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ರಾಜ್ಯಕ್ಕೆ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ವಿಜಯನಗರ ಜಿಲ್ಲೆಯ ವಿದ್ಯಾರ್ಥಿನಿಯರು ಪಡೆದಿದ್ದು, ಜಿಲ್ಲೆಯಲ್ಲಿ ಖುಷಿ ತಂದಿದೆ.