ಬೆಂಗಳೂರು: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಬಳಿಕ ಬಿಜೆಪಿ ರಾಷ್ಟ್ರಾಧ್ಯಕ್ಷರು ಬದಲಾವಣೆಯಾಗುವುದು ಬಹುತೇಕ ಖಚಿತವಾಗಿದ್ದು, ರೇಸ್‌ನಲ್ಲಿ ಕನ್ನಡಿಗರ ಹೆಸರೊಂದು ಮುನ್ನೆಲೆಗೆ ಬಂದಿದೆ. ಜೆ.ಪಿ.ನಡ್ಡಾ ಅವರು ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವುದರಿಂದ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ಖಚಿತವಾಗಿದೆ. ಈಗಾಗಲೇ ಹಲವು ಹೆಸರುಗಳು ಓಡಾಡುತ್ತಿದ್ದು, ಇವುಗಳ ಪೈಕಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಬಿ.ಎಲ್.ಸಂತೋಷ್ ಅವರ ಹೆಸರು ಕೇಳಿಬಂದಿದೆ. ಅವರೊಂದಿಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಭೂಪೇಂದ್ರ ಯಾದವ್ ಮತ್ತು ಮಹಾರಾಷ್ಟ್ರದ ವಿನೋದ್ ಥಾವಡೆ ಹೆಸರುಗಳು ರೇಸಿನಲ್ಲಿವೆ. ಒಂದು ವೇಳೆ ಸಂತೋಷ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಪಡೆದರೆ, ಈ ಹುದ್ದೆಗೆ ಏರಿದ ಮೊದಲ ಕನ್ನಡಿಗರಾಗುತ್ತಾರೆ.