ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಖಾಸಗಿ ವಸತಿ ಶಾಲೆಯಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಇದೀಗ ಅತ್ಯಂತ ಕರಾಳ ರೂಪ ಪಡೆದುಕೊಂಡಿದೆ. ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ, ಆರೋಪಿ ಧನಂಜಯ್ ಎಸಗಿರುವ ಸಾಲು ಸಾಲು ಅಕ್ರಮಗಳು ಮತ್ತು ಶಿಕ್ಷಣ ಇಲಾಖೆಯ ದಿವ್ಯ ನಿರ್ಲಕ್ಷ್ಯಗಳು ಒಂದೊಂದಾಗಿ ಹೊರಬರುತ್ತಿವೆ. ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದ್ದಲ್ಲದೆ, ಕಾನೂನುಬಾಹಿರವಾಗಿ ಈ ವಸತಿ ಶಾಲೆಯನ್ನು ನಡೆಸಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿ ಧನಂಜಯ್ ನಡೆಸುತ್ತಿದ್ದ ವಸತಿ ಶಾಲೆಗೆ ಸರಿಯಾದ ಪರವಾನಗಿಯೇ ಇರಲಿಲ್ಲ. ಆರೋಪಿಯು ಕೇವಲ ಬಾಲಕರ ಹಾಸ್ಟೆಲ್ ನಡೆಸಲು ಮಾತ್ರ ಅನುಮತಿ ಪಡೆದಿದ್ದು. ಯಾವುದೇ ಮುನ್ಸೂಚನೆ ಅಥವಾ ಅನುಮತಿ ಇಲ್ಲದೆ ಬಾಲಕಿಯರ ವಸತಿ ವ್ಯವಸ್ಥೆಯನ್ನು ಅಕ್ರಮವಾಗಿ ನಡೆಸುತ್ತಿದ್ದ. ಅಷ್ಟೇ ಅಲ್ಲದೆ, ಅಸ್ತಿತ್ವದಲ್ಲಿದ್ದ ಬಾಲಕರ ಹಾಸ್ಟೆಲ್ ಪರವಾನಗಿಯನ್ನು ಸಹ ಕಳೆದ ಒಂದು ವರ್ಷದಿಂದ ನವೀಕರಿಸಿರಲಿಲ್ಲ. ನಿಯಮಗಳನ್ನೆಲ್ಲ ಗಾಳಿಗೆ ತೂರಿ, ಅಧಿಕಾರಿಗಳ ಕಣ್ಣು ತಪ್ಪಿಸಿ ಈ ಶೈಕ್ಷಣಿಕ ಸಂಸ್ಥೆ ಎಂಬ ಹೆಸರಿನಲ್ಲಿ ಅಕ್ರಮ ಕೂಟ ನಡೆಯುತ್ತಿತ್ತು.
ಸಂತ್ರಸ್ತ ಬಾಲಕಿಯರು ನೀಡಿರುವ ದೂರು ಎದೆ ನಡುಗಿಸುವಂತಿದೆ. ಮದ್ಯದ ಅಮಲಿನಲ್ಲಿ ರಾತ್ರಿ ವೇಳೆ ಬಾಲಕಿಯರ ಕೊಠಡಿಗೆ ನುಗ್ಗುತ್ತಿದ್ದ ಧನಂಜಯ್, ಅಸಭ್ಯವಾಗಿ ವರ್ತಿಸುತ್ತಿದ್ದ. ತಾತನ ವಯಸ್ಸಿನ ಈ ವ್ಯಕ್ತಿಯ ವಿಕೃತಿಯನ್ನು ಸಹಿಸಲಾಗದ ಬಾಲಕಿಯರು, ಧನಂಜಯ್ ಪತ್ನಿ ಶೈಲಜಾ ಬಳಿ ನೋವು ತೋಡಿಕೊಂಡಿದ್ದರು. ಆದರೆ, ನ್ಯಾಯ ಒದಗಿಸಬೇಕಿದ್ದ ಆಕೆ, ತನ್ನ ಪತಿಯ ನೀಚ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಲ್ಲದೆ, “ಈ ವಿಷಯ ಯಾರಿಗೂ ತಿಳಿಯಬಾರದು” ಎಂದು ಮಕ್ಕಳಿಗೆ ಬೆದರಿಕೆ ಹಾಕಿದ್ದಳು. ಈ ಮೂಲಕ ಪತಿಯ ಕಾಮದಾಹಕ್ಕೆ ಪತ್ನಿಯೇ ಕುಮ್ಮಕ್ಕು ನೀಡುತ್ತಿದ್ದುದು ತನಿಖೆಯಿಂದ ದೃಢಪಟ್ಟಿದೆ.
ಈ ಭೀಕರ ಘಟನೆ ಹೊರಬರುವವರೆಗೂ ಜಿಲ್ಲಾ ಶಿಕ್ಷಣ ಇಲಾಖೆಯಾಗಲಿ ಅಥವಾ ಸಮಾಜ ಕಲ್ಯಾಣ ಇಲಾಖೆಯಾಗಲಿ ಈ ಅಕ್ರಮ ಶಾಲೆಯ ಕಡೆಗೆ ಕಣ್ಣೆತ್ತಿಯೂ ನೋಡಿಲ್ಲ. ಘಟನೆ ಬಯಲಾದ ನಂತರ ಎಚ್ಚೆತ್ತಿರುವ ಡಿಡಿಪಿಐ, ವಸತಿ ಶಾಲೆಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಅನುಮತಿ ಬೇಕು ಎನ್ನುತ್ತಿದ್ದಾರೆ. ಆದರೆ, ಸಮಾಜ ಕಲ್ಯಾಣ ಇಲಾಖೆಯು “ಖಾಸಗಿ ಶಾಲೆಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ” ಎಂದು ಜಾರಿಕೊಳ್ಳುತ್ತಿದೆ. ಇಲಾಖೆಗಳ ನಡುವಿನ ಈ ಗೊಂದಲ ಮತ್ತು ಸಮನ್ವಯದ ಕೊರತೆಯೇ ಇಂತಹ ಕ್ರಿಮಿನಲ್‌ಗಳಿಗೆ ಬಂಡವಾಳವಾಗಿದೆ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸದ್ಯ ಇಬ್ಬರು ಬಾಲಕಿಯರು ಧೈರ್ಯದಿಂದ ದೂರು ನೀಡಿದ್ದು, ಪೊಲೀಸರು ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಕ್ರಮವಾಗಿ ಶಾಲೆ ನಡೆಸಿದ ಮತ್ತು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬರುತ್ತಿದೆ. ಈ ಪ್ರಕರಣವು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಖಾಸಗಿ ವಸತಿ ಶಾಲೆಗಳ ಮೇಲೆ ಕಠಿಣ ನಿಗಾ ಇಡಬೇಕಾದ ಅಗತ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.


