ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆಯಲ್ಲಿ ಮಂಗಳಸೂತ್ರ ಮತ್ತು ಧರ್ಮದ ಸಂಕೇತಗಳನ್ನು ಧರಿಸದಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.. ಇತ್ತೀಚೆಗೆ ರಾಜ್ಯದಲ್ಲಿ ಸಿಇಟಿ ಪರೀಕ್ಷೆ ವೇಳೆ ಪರೀಕ್ಷಾರ್ಥಿಗಳು ಜನಿವಾರ ಹಾಕಿಕೊಂಡು ಬಂದಿದ್ದಕ್ಕೆ ಪರೀಕ್ಷೆಯಿಂದ ಹೊರಗುಳಿದಿದ್ದರು. ಪರೀಕ್ಷಾ ಸಿಬ್ಬಂದಿಗಳು ಜನಿವಾರ ತೆಗೆದುಹಾಕುವಂತೆ ಸೂಚಿಸಿರೋದು ರಾಜ್ಯಾದಂತ್ಯ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ರೈಲ್ವೆ ಇಲಾಖೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ನಾಳೆ (ಮಂಗಳವಾರ) ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರದೊಳಗೆ ಪಾಲಿಸಬೇಕಾದ ಸೂಚನೆಗಳನ್ನು ಪ್ರವೇಶ ಪತ್ರದಲ್ಲಿ ನಮೂದಿಸಲಾಗಿದೆ. ಪ್ರವೇಶ ಪತ್ರದ 7ನೇ ಕ್ರಮಾಂಕದ ಸೂಚನೆಯಲ್ಲಿ ಮಂಗಳಸೂತ್ರ ಧರಿಸುವಂತಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ. ಧರ್ಮದ ಸಂಕೇತಗಳನ್ನು ಧರಿಸದಂತೆ ನಮೂದಿಸಲಾಗಿದೆ. ಹಾಗಾಗಿ ಬ್ರಾಹ್ಮಣ ಹಾಗೂ ಇತರ ಸಮುದಾಯದವ ಧರಿಸುವ ಜನಿವಾರ, ವೀರಶೈವರು ಧರಿಸುವ ಕರಡಿಗೆಗೆ ಅವಕಾಶವಿಲ್ಲ. ಈ ಹಿಂದೆ ರಾಜ್ಯದಲ್ಲಿ ನಡೆದ ನೇಮಕಾತಿ ಪರೀಕ್ಷೆಯೊಂದರ ವೇಳೆ ಮಂಗಳಸೂತ್ರ ಬಿಚ್ಚಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.
ಕೇಂದ್ರ ಸರ್ಕಾರದ ಈ ನಿರ್ಧಾರ ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದಿದೆ ವಿಶ್ವ ಹಿಂದೂ ಪರಿಷತ್ ಆಕ್ರೋಶ ವ್ಯಕ್ತ ಪಡಿಸಿದೆ. ಧಾರ್ಮಿಕ ವಿರೋಧಿ ಧೋರಣೆ ಸಹಿಸಲು ಅಸಾಧ್ಯ..ಇದರ ಬಗ್ಗೆ ಸಂಸದರು, ಜಿಲ್ಲಾಧಿಕಾರಿಗಳು ಗಮನ ಹರಿಸಿ ಈ ನಿರ್ಧಾರ ಕೈ ಬೀಡಬೇಕು ಎಂದು ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಆಗ್ರಹಿಸಿದ್ದಾರೆ..