ನ್ಯೂಜಿಲೆಂಡ್ ತಂಡವು ನಮಗಿಂತ ಚೆನ್ನಾಗಿ ಕ್ರಿಕೆಟ್ ಆಡಿದೆ ಆದ್ದರಿಂದ ನಾವು ಪರಾಭವಗೊಂಡಿದ್ದೇವೆ ಎಂದು ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅವರು ಹತಾಶೆ ವ್ಯಕ್ತಪಡಿಸಿದ್ದಾರೆ. 2024ರ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಭಾರತ ತಂಡವು 58 ರನ್ಗಳ ಸೋಲು ಕಂಡಿದೆ.ಪಂದ್ಯದಲ್ಲಿ ನಮಗೆ ಗೆಲ್ಲುವ ಅನೇಕ ಅವಕಾಶಗಳು ಸಿಕ್ಕಿದ್ದವು. ಆದರೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ನಾವು ವಿಫಲವಾಗಿದ್ದೇವೆ. ಮುಖ್ಯವಾಗಿ ಮುಂದಿನ ಪಂದ್ಯಗಳಲ್ಲಿ ಕ್ಷೇತ್ರ ರಕ್ಷಣೆಯನ್ನು ಉತ್ತಮಪಡಿಸಿಕೊಳ್ಳಬೇಕು. ಅಲ್ಲದೆ ಈ ಸೋಲು ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹರ್ಮನ್ಪ್ರೀತ್ ಕೌರ್ ತಿಳಿಸಿದ್ದಾರೆ.
ನಾವು ಉತ್ತಮ ಕ್ರಿಕೆಟ್ ಆಡಿಲ್ಲ: ಹರ್ಮನ್ಪ್ರೀತ್ ಕೌರ್
ಪಂದ್ಯ ಮುಗಿದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹರ್ಮನ್ಪ್ರೀತ್ ಕೌರ್, “ನಾವು ನಮ್ಮ ಉತ್ತಮ ಪ್ರದರ್ಶನ ತೋರುವಲ್ಲಿ ನಾವು ಸಂಪೂರ್ಣವಾಗಿ ವಿಫಲವಾಗಿದ್ದೇವೆ. ಆದರೆ ಇದನ್ನು ಮರೆತು ಮುಂದೆ ನಡೆಯುತ್ತೇವೆ. ಎಲ್ಲ ಪಂದ್ಯಗಳು ನಿರ್ಣಾಯಕ ಎಂಬುದು ನಮಗೆ ತಿಳಿದಿದೆ. ನಾವು ಪಂದ್ಯ ಗೆಲ್ಲುವ ಅವಕಾಶ ಸೃಷ್ಟಿಸಿದ್ದೆವು ಆದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಎಡವಿದೆವು. ಅವರು ನಮಗಿಂತ ಉತ್ತಮ ಪ್ರದರ್ಶನ ತೋರಿದ್ದಾರೆ, ಇದರಲ್ಲಿ ಅನುಮಾನವೇ ಬೇಡ,”
ಬ್ಯಾಟ್ ಮಾಡಲು ಕಠಿಣವಾಗಿತ್ತು
ಬ್ಯಾಟಿಂಗ್ ನಡೆಸಲು ಕಠಿಣವಾಗಿದ್ದ ಪಿಚ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ನಾಯಕಿ ಸೋಫಿ ಡಿವೈನ್ (57* ರನ್) ಅರ್ಧಶತಕದ ನೆರವಿನಿಂದ 20 ಓವರ್ಗಳ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಈ ಗುರಿ ತಲುಪುವ ಭರವಸೆ ನಮಗಿತ್ತು ಎಂದು ಹರ್ಮನ್ಪ್ರೀತ್ ಕೌರ್ ತಿಳಿಸಿದ್ದಾರೆ.
ಈ ರೀತಿಯ ಫಲಿತಾಂಶ ನಿರೀಕ್ಷಿಸಿರಲಿಲ್ಲ
“ನಮ್ಮ ಗುಂಪಿನಲ್ಲಿ ಎಲ್ಲ ತಂಡಗಳು ಬಲಿಷ್ಠವಾಗಿವೆ ಎಂಬುದು ನಮಗೆ ತಿಳಿದಿದೆ. ನಾವು ಈ ರೀತಿಯ ಫಲಿತಾಂಶ ನಿರೀಕ್ಷಿಸಿರಲಿಲ್ಲ. ಆದರೆ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತೇವೆ, ಇಂದಿನ ಪಂದ್ಯದಲ್ಲಿ ನಾವು ಕ್ಷೇತ್ರ ರಕ್ಷಣೆಯಲ್ಲಿ ಹಲವು ತಪ್ಪುಗಳನ್ನು ಮಾಡಿದ್ದೇವೆ. ಅದನ್ನು ನಾವು ಸರಿಪಡಿಸಿಕೊಳ್ಳಬೇಕು,” ಎಂದು ಹರ್ಮನ್ಪ್ರೀತ್ ಕೌರ್ ಹೇಳಿದ್ದಾರೆ.