ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೋ ಬ್ರೋಕರ್ ಆ್ಯಪ್ ಮೂಲಕ ಮನೆ ಹುಡುಕುವವರಿಗೆ ಕಡಿಮೆ ಬೆಲೆಗೆ ದೊಡ್ಡ ಮನೆಯಲ್ಲಿ ಭೋಗ್ಯಕ್ಕೆ ಕೊಡುವುದಾಗಿ ಬರೋಬ್ಬರಿ 22 ಜನರಿಂದ 2 ಕೋಟಿ ರೂ.ನಷ್ಟು ಹಣವನ್ನು ಪಡೆದು ವಂಚಿಸಿ ಪರಾರಿ ಆಗಿರುವ ಘಟನೆ ಬೆಳಕಿಗೆ ಬಂದಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ಅಥವಾ ಭೋಗ್ಯಕ್ಕೆ ಪಡೆಯುವಾಗ ಭಾರೀ ಎಚ್ಚರಿಕೆ ವಹಿಸಬೇಕು. ಆನ್‌ಲೈನ್ ಬ್ರೋಕರೇಜ್‌ನಲ್ಲಿ (ನೋ ಬ್ರೋಕರ್ ಆ್ಯಪ್) ಮನೆ ಬಾಡಿಗೆ ಮತ್ತು ಭೋಗ್ಯಕ್ಕೆ ಇದೆಯೆಂದು ಫೋಟೋ ಹಾಗೂ ಮನೆ ಕೇಳಿಕೊಂಡು ಬರುವವರಿಗೆ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇಲ್ಲೊಬ್ಬ ಅಸಾಮಿ ಬ್ರೋಕರೇಜ್‌ನಲ್ಲಿ ಮನೆಯನ್ನು ತೋರಿಸಿ ಕಡಿಮೆ ಬೆಲೆಗೆ ನಿಮಗೆ ಮನೆಯನ್ನು ಲೀಸ್ ಕೊಡುವುದಾಗಿ ನಂಬಿಸಿ ಬರೋಬ್ಬರಿ 22 ಜನರಿಂದ 7 ರಿಂದ 10 ಲಕ್ಷ ರೂ. ಹಣವನ್ನು ಪಡೆದುಕೊಂಡು ಒಟ್ಟಾರೆ 2 ಕೋಟಿ ರೂ.ನಷ್ಟು ಹಣವಾದ ನಂತರ ಎಲ್ಲರಿಗೂ ವಂಚಿಸಿ ಪರಾರಿ ಆಗಿದ್ದಾನೆ.
ಹೌದು, ಒಂದು ಮನೆಯ ಸುತ್ತ, 22 ಜನರ ಕಣ್ಣೀರ ಕಥೆ ನಡೆದಿದೆ. ಕೋಟಿ ಕೋಟಿ ಲೂಟಿ ಮಾಡಿದವನು ಪರಾರಿ ಆಗಿದ್ದಾನೆ. ಹೊಟ್ಟೆ ಬಟ್ಟೆ ಕಟ್ಟಿ ಹಣ ಕೂಡಿಟ್ಟವರು ಇದೀಗ ಬೀದಿಯಲ್ಲಿ ಬೀಳುವಂತಾಗಿದೆ. ಒಂದಿಡೀ ಕುಟುಂಬ ಸೇರಿ ವಂಚನೆ ಬಲೆ ಹೆಣೆದು 22 ಜನರಿಗೆ ಮೋಸ ಮಾಡಿದ್ದಾರೆ. ನೋ ಬ್ರೋಕರ್ ಆ್ಯಪ್ ನಂಬಿ ಕಣ ಕೊಟ್ಟವರ ಕಣ್ಣೀರ ಕಥೆ ಇದು. ಮನೆ ಚೆನ್ನಾಗಿದೆ ಅಂತಾ ಲಕ್ಷ ಲಕ್ಷ ಹಣ ಲೀಸ್‌ಗೆ ಕೊಟ್ಟವರಿಗೆ ಪಂಗನಾಮ ಬಿದ್ದಿದೆ. ಒಂದೇ ಮನೆ ತೋರಿಸಿ 22 ಜನರಿಂದ ಹಣ ವಸೂಲಿ ಮಾಡಲಾಗಿದೆ. ಇದಕ್ಕಾಗಿ ವಂಚಕನ ಮನೆ ಮಂದಿಯೆಲ್ಲಾ ಹೈಡ್ರಾಮಾ ಮಾಡಿದ್ದಾರೆ. ಈ ಮೂಲಕ ಇಪ್ಪತ್ತೆರಡು ಜನರಿಗೆ ಬರೋಬ್ಬರಿ 2 ಕೋಟಿ ರೂ.ಗೂ ಅಧಿಕ ಹಣ ದೋಚಿ ಪರಾರಿಯಾಗಿದ್ದಾರೆ.
ಇನ್ನು ಹಣ ಕಳೆದುಕೊಂಡವರಿಂದ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಇಷ್ಟು ದೊಡ್ಡ ಮಟ್ಟದ ವಂಚನೆ ನಡೆದ ದೂರು ನೀಡಿದರೂ ಪೊಲೀಸರ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ಮಾಡಿದ್ದರಿಂದ ಅವರ ವಿರುದ್ಧ ಬೇಸೆತ್ತು ಸಿಸಿಬಿಗೆ ದೂರು ನೀಡಿದ್ದಾರೆ.
ಘಟನೆ ನಡೆದಿದ್ದಾರೂ ಏನು ಇಲ್ಲಿದೆ ನೋಡಿ ಮಾಹಿತಿ..
ಹೆಬ್ಬಾಳ ಸಮೀಪದ ಚೋಳನಗರದಲ್ಲಿರುವ ಮನೆಯನ್ನು ಲೀಸ್‌ಗೆ ಇದೆ ಎಂದು ಗಿರೀಶ್ ಎನ್ನುವ ವ್ಯಕ್ತಿ ‘ನೋ ಬ್ರೋಕರ್ ಆ್ಯಪ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಹೀಗಾಗಿ, 22 ಜನರು ಗಿರೀಶ್ ಅವರಿಗೆ ಕಾಲ್ ಮಾಡಿ ಸಂಪರ್ಕ ಮಾಡಿದ್ದಾರೆ. ಎಲ್ಲರಿಗೂ ಮನೆ ಲೀಸ್‌ಗೆ ಕೊಡ್ತಿನಿ ಎಂದು ಅಡ್ವಾನ್ಸ್ ಹಣ ವಸೂಲಿ ಮಾಡಿದ್ದಾನೆ. ಒಬ್ಬೊಬ್ಬರಿಂದ ₹8 ರಿಂದ ₹13 ಲಕ್ಷದವರೆಗೆ ಒಟ್ಟಾರೆ ₹2 ಕೋಟಿಗೂ ಅಧಿಕ ಹಣ ವಸೂಲಿ ಮಾಡಿದ್ದಾನೆ. ಮನೆ ಕೊಡಿ ಎಂದರೆ ಗಿರೀಶ್ ಒಂದೊಂದು ಕಥೆ ಹೇಳುತ್ತಲೇ ಬರುತ್ತಿದ್ದನು. ಇನ್ನು ಮನೆ ರಿನೋವೇಶನ್ ಆಗುತ್ತುಇದೆ, ಈಗಿರುವ ಬಾಡಿಗೆದಾರರ ಜೊತೆ ಸಮಸ್ಯೆ ಆಗಿದೆ ಎಂದು ಮನೆ ಭೋಗ್ಯಕ್ಕೆ ಕೊಡದೇ ಕಥೆ ಹೇಳಿಕೊಂಡು ತಿರುಗುತ್ತಿದ್ದನು.
ಗಿರೀಶನ ಕೃತ್ಯಕ್ಕೆ ಆತನ ಪತ್ನಿ ದೀಪಾ, ತಂದೆ ಹಾಗೂ ಎಲ್ಲ ಕುಟುಂಬಸ್ಥರು ಸಾಥ್ ನೀಡಿದ್ದಾರಂತೆ. ಹಣ ವಾಪಸ್ ನೀಡೋದಾಗಿ ಗಿರೀಶ್ ನಾದಿನಿ ಸರಿತಾ ಅವರು ಪತ್ರ ಬರೆದುಕೊಟ್ಟಿದದ್ದರು. ಈ ಪ್ರಕರಣ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇಷ್ಟಾದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಸಂತ್ರಸ್ತರು ಸಿಸಿಬಿಗೆ ದೂರು ನೀಡಿದ್ದಾರೆ.