ಮಂಡ್ಯ: ನುಡಿದಂತೆ ನಡೆಯುವವರನ್ನ ಬೆಂಬಲಿಸಿದರೆ ರಾಜ್ಯದ ಅಭಿವೃದ್ಧಿಯಾಗುತ್ತದೆ.ಎಂದು ಮಂಡ್ಯದಲ್ಲಿ ನಡೆದ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಸಿಎಂ ಸಿದ್ದು ಗುಡುಗಿದರು. ಕಳೆದ ಚುನಾವಣೆಯಲ್ಲಿ ರಾಜ್ಯದ ಜನ ನಮ್ಮ ನಿರೀಕ್ಷೆಯನ್ನೂ ಮೀರಿ ಆಶೀರ್ವಾದ ಮಾಡಿದ್ದಾರೆ. 136 ಸ್ಥಾನಗಳಲ್ಲಿ ನಮ್ಮನ್ನು ಗೆಲ್ಲಿಸಿದ್ದಾರೆ. ಮಂಡ್ಯ ಜನರೂ ಕೂಡ ಸುಳ್ಳು ಭರವಸೆ ನೀಡಿದ್ದರೂ, ದಾರಿ ತಪ್ಪಿಸುವ ಕೆಲಸ ಮಾಡಿದ್ದರೂ ಸರಿಯಾದ ತೀರ್ಮಾನವನ್ನೇ ಮಾಡಿದ್ದಾರೆ ಎಂದರು.
ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೆ ತಂದೆವು. ಪ್ರಮಾಣವಚನ ಸ್ವೀಕಾರ ಮಾಡಿದ ದಿನವೇ 5 ಗ್ಯಾರಂಟಿಗಳ ಜಾರಿಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದೆವು. ಕೃಷಿ ಇಲಾಖೆಗೆ 600 ಕೋಟಿ ರೂ.ಗಳನ್ನು ಬೆಳೆ ವಿಮೆಗೆ ನೀಡಲಾಗಿದ್ದು, ಇನ್ನೂ 800 ಕೋಟಿ ರೂ.ಗಳನ್ನು ನೀಡಲಾಗುವುದು. 33.25 ಲಕ್ಷ ರೈತರಿಗೆ 631 ಕೋಟಿ ರೂ.ಗಳನ್ನು ತಲಾ 2000 ರೂ.ಗಳ ಬೆಳೆ ಪರಿಹಾರಕ್ಕೆ ನೀಡಿದ್ದೇವೆ.
ಮಂಡ್ಯ ಅಭಿವೃದ್ಧಿಗೆ 500 ಕೋಟಿ..!
ಬಿಜೆಪಿ ಮೇಲೆ ಜೆಡಿಎಸ್ ಅವರಿಗೆ ಬಹಳ ಪ್ರೀತಿ ಉಂಟಾಗಿದೆ. ನಮ್ಮ ಗ್ಯಾರಂಟಿಗಳ ಬಗ್ಗೆ ಟೀಕಿಸುತ್ತಾರೆ. ಜನರಿಗೆ ಸತ್ಯ ತಿಳಿಸದೆ ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾವು ನಿಮ್ಮ ಪರ ಇದ್ದೇವೆ. ಮಂಡ್ಯ ಜಿಲ್ಲೆಯನ್ನು ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು. 500 ಕೋಟಿ ರೂ.ಗಳನ್ನು ಜಿಲ್ಲೆಗೆ ನೀಡಲಾಗುತ್ತಿದೆ. ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ನೀರಾವರಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ವ್ಯವಸಾಯದ ಮೇಲೆ ಅವಲಂಬಿತ ಜನ ಹೆಚ್ಚಿದ್ದು, ಅಭಿವೃದ್ಧಿ ಮಾಡಲು ಪಣ ತೊಟ್ಟಿದ್ದೇವೆ. ಯಾರೂ ಏನೇ ಹೇಳಿದರೂ ಕೆಲಸ ಮಾಡಿದವರನ್ನು ಗೆಲ್ಲಿಸಬೇಕು ಎಂದರು.
ಅನ್ನಭಾಗ್ಯ ಯೋಜನೆಯಡಿ 5 ಕೆಜಿಯ ಜೊತೆಗೆ 5 ಕೆಜಿ ಅಕ್ಕಿ ನೀಡಿ, ರಾಜ್ಯವನ್ನು ಹಸಿವು ಮುಕ್ತ ಮಾಡುವ ಸರ್ಕಾರದ ಉದ್ದೇಶಕ್ಕೆ ಕೇಂದ್ರ ಸರ್ಕಾರ ಸಹಕರಿಸಲಿಲ್ಲ. ಆದ್ದರಿಂದ 5 ಕೆಜಿ ಬದಲಿಗೆ 170 ರೂ.ಗಳನ್ನು ನೀಡುತ್ತಿದ್ದೇವೆ. ಜಿಲ್ಲೆಯಲ್ಲಿ 438705 ಫಲಾನುಭವಿಗಳಿಗೆ 166 ಕೋಟಿ ರೂ.ಗಳ ಅನ್ನಭಾಗ್ಯದ ಆರ್ಥಿಕ ನೆರವು ನೀಡಲಾಗಿದೆ. ಬಡವರ ಬೆಂಬಲಕ್ಕೆ ನಿಲ್ಲದ ಬಿಜೆಪಿ ಸರ್ಕಾರವನ್ನು ಗೆಲ್ಲಿಸಬೇಕೇ ಎಂದು ಬಿಜೆಪಿಯ ವಿರುದ್ಧ ಸಿಎಂ ಕಿಡಿಕಾರಿದರು.