ಪೇಡಾ ನಗರಿ ಧಾರವಾಡದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಜಯಂತಿ ಅದ್ದೂರಿಯಾಗಿ ನಡೆಯಿತು.ಜಿಲ್ಲಾಡಳಿತ ಹಾಗೂ ವಿವಿಧ ದಲಿತ ಸಂಘಟನೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನೇಕ ಸಾಮಾಜಿಕ ಮತ್ತು ರಾಜಕೀಯ ನಾಯಕರು ಪಾಲ್ಗೊಂಡಿದ್ದರು.
ಧಾರವಾಡದ ಅಂಬೇಡ್ಕರ್ ಮೂರ್ತಿಗೆ ಬೆಳಿಗ್ಗೆಯಿಂದಲೇ ವಿವಿಧ ಸಂಘಟನೆಗಳ ಮುಖಂಡರು, ರಾಜಕೀಯ ನಾಯಕರು, ಅಧಿಕಾರಿಗಳು ಮಾಲಾರ್ಪಣೆ ಮಾಡಿ ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸಿದರು. ಬಳಿಕ ವಿವಿಧ ದಲಿತ ಸಂಘಟನೆಗಳ ಜೊತೆಗೆ ಎರಡ್ಮೂರು ತಂಡಗಳಾಗಿ ಧಾರವಾಡದ ಅನೇಕ ರಸ್ತೆಗಳಲ್ಲಿ ಬೈಕ್ ರ್‍ಯಾಲಿ ನಡೆಸಿದರು.
ಅಂಬೇಡ್ಕರ್ ಜಯಂತಿ ಅಂಗವಾಗಿ ಧಾರವಾಡ ಜಿಲ್ಲಾಡಳಿತ ಅಂಬೇಡ್ಕರ್ ಅವರ ಭಾವಚಿತ್ರವನ್ನ ಹಿಡಿದು ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು . ಈ ಮೆರವಣಿಗೆಯಲ್ಲಿ ಮಹಿಳಾ ಡೊಳ್ಳು ಕುಣಿತದವರು, ಬೊಂಬೆ ಕುಣಿತದವರು ಕೂಡ ಪಾಲ್ಗೊಂಡು ಗಮನಸೆಳೆದರು. ನಂತರ ನಡೆದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮಕ್ಕೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ದಲಿತ ಮುಖಂಡರು, ಕಾರ್ಯಕರ್ತರು, ಬೌದ್ಧ ಧರ್ಮದ ಮುಖಂಡರು ಕೂಡ ಪಾಲ್ಗೊಂಡು ಅಂಬೇಡ್ಕರವರು ನಡೆದು ಬಂದ ದಾರಿಯ ಕುರಿತು ಸ್ಮರಿಸಿದರು. ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಮುಖ್ಯ ಅಧಿಕಾರಿಗಳು ಮತ್ತು ದಲಿತ ಸಂಘಟನೆಯ ಮುಖಡರು ಉಪಸ್ಥಿತರಿದ್ದರು.