ತಮಿಳುನಾಡು : ಚಂಡಮಾರುತದ ಕಾರಣದಿಂದಾಗಿ ತಮಿಳುನಾಡಿನ 4 ಜಿಲ್ಲೆಗಳಲ್ಲಿ ಭಾರೀ ಮಳೆ ಆಗುತ್ತಿದೆ. ತಮಿಳುನಾಡಿನ ತೂತುಕುಡಿಯ ಆದಿಪರಾಶಕ್ತಿ ನಗರದಲ್ಲಿ ಮಳೆ ಆರ್ಭಟಕ್ಕೆ ಸಿಲುಕಿ ವೃದ್ದ ದಂಪತಿ ಪರದಾಡುತ್ತಿದ್ದಾರೆ. ಅನಾರೋಗ್ಯ ಪತಿಯೊಂದಿಗೆ ನೀರಿನಲ್ಲಿ ವೃದ್ಧೆ ಸಿಲುಕಿದ್ದು, ಮನೆ ಒಳಗೆ ನೀರು ನುಗ್ಗಿರೋ ಪರಿಣಾಮ ಆಚೆ ಬರಲಾಗದೇ ವೃದ್ದ ದಂಪತಿ ಸಂಕಷ್ಟದಲ್ಲಿದ್ದಾರೆ. ಅನಾರೋಗ್ಯ ಪೀಡಿತ ಗಂಡನನ್ನ ಸಂತೈಸುತ್ತಿರೋ ವೃದ್ದ ಮಹಿಳೆಯ ಪೋಟೊವೊಂದು ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾ ಮೂಲಕ ವೃದ್ದರನ್ನ ರಕ್ಷಿಸುವಂತೆ ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ.
ತಮಿಳುನಾಡು ರಾಜ್ಯದ ತಿರುನಲ್ವೇಲಿ, ತೆಂಕಾಶಿ, ಟುಟಿಕಾರಿನ್ ಹಾಗೂ ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಭಾರೀ ಮಳೆ ಆಗುತ್ತಿದೆ. ಶನಿವಾರ, ಭಾನುವಾರ ಸುರಿದ ಭಾರೀ ಮಳೆ ಸೋಮವಾರವೂ ಮುಂದುವರೆದಿದ್ದು, ರಾಜ್ಯದ ಹಲವೆಡೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಮಧುರೈ ಹಾಗೂ ವಿರುಧುನಗರ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯು ಹೈ ಅಲರ್ಟ್ ಜಾರಿ ಮಾಡಿದೆ. ಸೋಮವಾರದವರೆಗೂ ಇಲ್ಲಿ ರೆಡ್ ಅಲರ್ಟ್ ಜಾರಿ ಇರಲಿದೆ.