ಮಡಿಕೇರಿ: ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಕುಶಾಲನಗರದಲ್ಲಿ ಆಯೋಜಿಸಲಾಗಿದ್ದ ಡ್ರಗ್ಸ್ ಮತ್ತು ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ “ಕರ್ನಾಟಕ ಪೊಲೀಸ್ ರನ್” ಕಾರ್ಯಕ್ರಮಕ್ಕೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರು ಚಾಲನೆ ನೀಡಿದರು.
ಇಂದು ಬೆಳಗ್ಗೆ 7:30 ಗಂಟೆಗೆ ಪೊಲೀಸ್ ಇಲಾಖೆ ವತಿಯಿಂದ ಮಾದಕ ವಸ್ತುಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿಗಾಗಿ ವಾಕಥಾನ್ ಹಮ್ಮಿಕೊಳ್ಳಲಾಗಿದ್ದನ್ನು ಮಾನ್ಯ ಶಾಸಕರು ಮತ್ತು ಪೊಲೀಸ್ ವರಿಷ್ಟಾಧಿಕಾರಿಗಳು ಹಾಗೂ ಪ್ರಮುಖರು ಉದ್ಘಾಟಿಸಿದರು. ಕೊಡಗು ಜಿಲ್ಲೆಯ ವಿವಿಧ ಭಾಗಗಳ ಶಾಲಾ ಕಾಲೇಜಿನ ಮಕ್ಕಳು ಜಿಲ್ಲೆಯ ಸುಮಾರು 300ಕ್ಕೂ ಅಧಿಕ ಪೊಲೀಸರು ಮತ್ತು ವಿವಿಧ ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಪ್ರಗತಿಪರ ಚಿಂತಕರು ಇದರಲ್ಲಿ ಭಾಗವಹಿಸಿದ್ದರು.
ಬೆಳಗ್ಗೆ ಏಳು ಗಂಟೆಯಿಂದ ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜ್ ನಿಂದ ಆರಂಭವಾಗಿ ಕುಶಾಲನಗರ ಸರ್ಕಾರಿ ಆಸ್ಪತ್ರೆ, ರಥ ಬೀದಿಯಾಗಿ ಜಿಎಂಪಿ ಶಾಲೆವರೆಗೆ ನಡೆದ ( ಸುಮಾರು 5 ಕಿಲೋ ಮೀಟರ್ ) ವಾಕಥಾನ್ ನಂತರ ಜಿಎಂಪಿ ಶಾಲೆಯ ಮೈದಾನ ದಲ್ಲಿ ಸಭಾ ಕಾರ್ಯಕ್ರಮವನ್ನು ನಡೆಸಲಾಯಿತು.