ಈದ್ ಮಿಲಾದ್ ಅಂಗವಾಗಿ ಸೆ. 16ರಂದು ನಗರದ ವಿವಿಧ ಮೈದಾನಗಳಲ್ಲಿ ಕಾರ್ಯಕ್ರಮಗಳು ಹಾಗೂ ಸ್ತಬ್ಧಚಿತ್ರಗಳ ಮೆರವಣಿಗೆ ಆಯೋಜನೆಯಾಗಿದ್ದು, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಕೆಲ ಕಟ್ಟುನಿಟ್ಟಿನ ಸೂಚನೆಗಳನ್ನು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ನೀಡಿದ್ದಾರೆ. ವೈ.ಎಂ.ಸಿ.ಎ ಮೈದಾನ, ಮಿಲ್ಲರ್ಸ್ ರಸ್ತೆ ಖುದ್ದುಸಾಬ್ ಈದ್ಗಾ ಮೈದಾನ, ಶಿವಾಜಿನಗರ ಛೋಟಾ ಮೈದಾನ, ಭಾರತೀನಗರ ಸುಲ್ತಾನ್ ಜೀ ಗುಂಟಾ ಮೈದಾನ ಹಾಗೂ ಇತರೆಡೆ ಕಾರ್ಯಕ್ರಮಗಳು ನಡೆಯಲಿವೆ.
ಮೆರವಣಿಗೆ ಶಾಂತ ರೀತಿಯಲ್ಲಿ ಸಾಗುವಂತೆ ಸಹಕರಿಸಬೇಕು. ಹರಿತವಾದ ವಸ್ತುಗಳನ್ನು ಹೊಂದಿರಬಾರದು. ಡಿ.ಜೆ. ಬಳಸುವಂತಿಲ್ಲ, ಸ್ತಬ್ಧಚಿತ್ರಗಳು ಪ್ರಚೋದನಾತ್ಮಕ ಅಂಶ ಒಳಗೊಂಡಿರಬಾರದು. ಪೂಜಾ ಸ್ಥಳಗಳು ಮುಂಭಾಗದಲ್ಲಿ ಘೋಷಣೆ ಕೂಗಬಾರದು.
ಮೆರವಣಿಗೆ ವೇಳೆ ಆಯೋಜಕರು ವಿದ್ಯುತ್ ಸಂಪರ್ಕಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ಬೆಂಕಿ ನಂದಿಸುವ ಸಾಮಗ್ರಿ ಇಟ್ಟುಕೊಂಡಿರಬೇಕು, ರಾತ್ರಿ ಮೆರವಣಿಗೆ ಮುಗಿದ ನಂತರ ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚು ಜನ ಪ್ರಯಾಣಿಸಬಾರದು. ಹಿರಿಯ ನಾಗರಿಕರು, ಶಾಲಾ ಮಕ್ಕಳು ಹಾಗೂ ಇತರರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಕಡಿಮೆ ಪ್ರಮಾಣದ ಶಬ್ದದೊಂದಿಗೆ ಬೆಳಗ್ಗೆ 6ರಿಂದ ರಾತ್ರಿ 10 ರ ವರೆಗೆ ಮಾತ್ರ ಬಳಸಿಕೊಳ್ಳಬೇಕು ಎಂದು ಆದೇಶಿಸಲಾಗಿದೆ.