ರಾಮನಗರ: ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶಕ್ಕೆ ಇನ್ನು ನಾಲ್ಕು ದಿನವಷ್ಟೇ ಬಾಕಿ ಇದ್ದು ಬೆಟ್ಟಿಂಗ್ ಭರಾಟೆ ಜೋರಾಗಿದೆ.
ಸ್ಥಳೀಯವಾಗಿ ಅಷ್ಟೇ ಅಲ್ಲದೆ ಹೊರಗಡೆಯೂ ಹೈವೋಲ್ಟೇಜ್ ಕಣವಾಗಿರುವ ಕ್ಷೇತ್ರದ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸದ್ಯದ ಬೆಟ್ಟಿಂಗ್ ಟ್ರೆಂಡ್ ಪ್ರಕಾರ ಸ್ಥಳೀಯ ಬುಕ್ಕಿಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಹಾಗೂ ಹೊರಗಿನವರಿಗೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಫೇವರಿಟ್ ಆಗಿದ್ದಾರೆ.
ಕಾಂಗ್ರೆಸ್ ಪಕ್ಷದ ಸಿಪಿ ಯೋಗೇಶ್ವರ್ ಮತ್ತು ಪ್ರಧಾನಿ ಎಚ್‌ಡಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ವಿರುದ್ಧ ಕಣಕ್ಕಿಳಿದಿರುವುದರಿಂದ ಅನಿರೀಕ್ಷಿತ ಫಲಿತಾಂಶ ಬರುವ ಸಾಧ್ಯತೆಯಿದೆ. ಮತದಾನ ನಡೆದ ಮಾರನೇ ದಿನ ಮಾತನಾಡಿದ್ದ ಯೋಗೇಶ್ವರ್, ಪ್ರಚಾರದ ವೇಳೆ ಸಚಿವ ಜಮೀರ್ ಅಹಮದ್ ಖಾನ್, ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ. ದೇವೇಗೌಡರ ಕುರಿತು ಆಡಿದ ಮಾತುಗಳಿಂದ ಲಾಭದಷ್ಟೇ ನಷ್ಟವೂ ಆಗಿದೆ. ನಿಖಿಲ್ ಮತ್ತು ನನ್ನ ಮಧ್ಯೆ ಸಮಬಲದ ಪೈಪೋಟಿ ಇದ್ದು, ಯಾರೇ ಗೆದ್ದರೂ ಕೂದಲೆಳೆಯಷ್ಟೇ ಅಂತರವಿರಲಿದೆ ಎಂದಿದ್ದರು. ಯೋಗೇಶ್ವರ್ ಈ ಮಾತು ಬೆಟ್ಟಿಂಗ್ ಲೆಕ್ಕಾಚಾರ ಬದಲಿಸಿರುವುದು ನಿಜ. ಕಾಂಗ್ರೆಸ್ ಅಭ್ಯರ್ಥಿ ಫಲಿತಾಂಶಕ್ಕೆ ಮುಂಚೆಯೇ ಸೋಲು ಒಪ್ಪಿಕೊಂಡಿದ್ದಾರೆ ಎಂಬ ಸಂದೇಶವನ್ನು ಅವರ ಮಾತುಗಳು ಹೊರಗಿನವರಿಗೆ ನೀಡಿದ್ದವು, ಆದರೂ ಬೆಟ್ಟಿಂಗ್ ಕಟ್ಟುವವರ ಹುಮ್ಮಸ್ಸು ಏನೂ ಕಡಿಮೆಯಾಗಿಲ್ಲ, ಜೆಡಿಎಸ್ ಪರ ಹೆಚ್ಚಿನ ಉತ್ಸಾಹ ತೋರಿದ್ದಾರೆ.


