ವಿಶ್ವದ ಹಲವು ದೇಶಗಳಲ್ಲಿ ಮತ್ತೆ ಆತಂಕ ಮೂಡಿಸಿರುವ ಕೋವಿಡ್ – 19 ವೈರಾಣುವಿನ ಹೊಸ ರೂಪಾಂತರಿ ಜೆನ್.1 ಕೇರಳದ ಮಹಿಳೆಯೊಬ್ಬರಲ್ಲಿ ಪತ್ತೆಯಾಗಿದೆ. ಇಂತಹ ಪ್ರಕರಣವು ಭಾರತದಲ್ಲಿ ಮೊದಲ ಬಾರಿ ವರದಿಯಾಗಿದೆ. ಸೋಂಕಿನ ಲಕ್ಷಣಗಳು ಸೌಮ್ಯವಾಗಿದ್ದು, ಪ್ರಾಣಾಪಾಯವಿಲ್ಲ ಎಂದು ಸ್ಥಳೀಯ ವೈದ್ಯಾಧಿಕಾರಿ ತಿಳಿಸಿದ್ದಾರೆ.
ಶೀತ, ಜ್ವರದ ಅನಾರೋಗ್ಯ ಸೌಮ್ಯ ಲಕ್ಷಣಗಳನ್ನು ಹೊಂದಿದ್ದ ಸುಮಾರು 79 ವರ್ಷದ ಮಹಿಳೆಯ ಸ್ಯಾಂಪಲ್ ಅನ್ನು ನ.18ರಂದು ಆರ್ಟಿ-ಪಿಸಿಆರ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಮಹಿಳೆಯಲ್ಲಿ ಜೆನ್.1 ವೈರಾಣು ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಮಹಿಳೆ ಕೋವಿಡ್ನಿಂದ ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕಟ್ಟೆಚ್ಚರ
ಕೇರಳದಲ್ಲಿ ಹೊಸ ತಳಿ ಕೋವಿಡ್ ಪತ್ತೆಯಾದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಎಚ್ಚರಿಕೆ ವಹಿಸಲಾಗುತ್ತಿದೆ. ರಾಜ್ಯದಲ್ಲಿ ಸಾಂಕ್ರಾಮಿಕ ಹರಡುವ ಸಾಧ್ಯತೆ ಇರುವುದರಿಂದ ಸಿದ್ಧತೆಯನ್ನು ಪರಿಶೀಲಿಸಲು ಆಸ್ಪತ್ರೆಗಳಲ್ಲಿ ಅಣಕು ಕಾರ್ಯಾಚರಣೆ ನಡೆಸಲು ಸರ್ಕಾರ ನಿರ್ಧರಿಸಿದೆ. ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್, ಔಷಧಗಳ ಸಂಗ್ರಹ, ಐಸಿಯ ಮತ್ತು ಹಾಸಿಗೆ ಸಾಮರ್ಥ್ಯಗಳ ಲಭ್ಯತೆಯ ಮೌಲ್ಯಮಾಪನ ಮಾಡಲು ಉದ್ದೇಶಿಸಲಾಗಿದೆ.
ಈ ಸಂಬಂಧ ಚರ್ಚೆ ನಡೆಸಲು ಮಂಗಳವಾರ ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿಯ (ಟಿಎಸಿ) ಸಭೆ ಕರೆದಿರುವುದಾಗಿ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.ಶನಿವಾರ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಚಿವರು ಸಭೆ ನಡೆಸಿದ್ದು, ಕರ್ನಾಟಕ ವೈದ್ಯಕೀಯ ಪೂರೈಕೆ ನಿಗಮದ ಮೂಲಕ ಪರೀಕ್ಷಾ ಕಿಟ್‌ಗಳನ್ನು ಖರೀದಿಸುವಂತೆ ನಿರ್ದೇಶನ ಹೊರಡಿಸಿದ್ದಾರೆ.