ಕಾಂಗ್ರೆಸ್ನ ಅನ್ಯಾಯಗಳಿಗೆ ಉತ್ತರ ನೀಡಲು ಲೋಕಸಭಾ ಚುನಾವಣೆಯೇ ಸರಿಯಾದ ಸಮಯ : ಡಾ ಕೆ ಸುಧಾಕರ್

ಚಿಕ್ಕಬಳ್ಳಾಪುರ : ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭೆಯ ಚುನಾವಣಾ ಪ್ರಚಾರವನ್ನು ದೇವನಹಳ್ಳಿಯಿಂದ ಆರಂಭಿಸಲಿದ್ದಾರೆ. ಕಾಂಗ್ರೆಸ್ಗೆ ಉತ್ತರ ನೀಡಲು ಈ ಚುನಾವಣೆಯೇ ಸರಿಯಾದ ಸಮಯ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ದೇವನಹಳ್ಳಿಗೆ ಮಾರ್ಚ್ 15 ರಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿರುವ ಹಿನ್ನೆಲೆಯಲ್ಲಿ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭಾ ಚುನಾವಣಾ ಪ್ರಚಾರವನ್ನು ದೇವನಹಳ್ಳಿಯಿಂದಲೇ ಆರಂಭಿಸುತ್ತಿದ್ದಾರೆ. ಪ್ರತಿ ರೈತರ ಖಾತೆಗೆ ಪ್ರತಿ ವರ್ಷ 6 ಸಾವಿರ ರೂ. ನೀಡುತ್ತಿದ್ದಾರೆ. ಅಂತಹ ಪ್ರಧಾನಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬರುತ್ತಿದ್ದು, ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಬೇಕು ಎಂದು ಹೇಳಿದರು.
ದೇಶದಲ್ಲಿ ಎರಡು ಸಂವಿಧಾನ ಇರಬಾರದು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಆಡಳಿತ ಪಾತಾಳಕ್ಕೆ ಹೋಗಿದೆ. ಶಕ್ತಿ ಕೇಂದ್ರವಾದ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೇಳಿಬಂದಿದೆ.
ಕುಕ್ಕರ್ನಲ್ಲಿ ಬಾಂಬ್ ಇಟ್ಟವರನ್ನು ಬ್ರದರ್ಗಳು ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಪಾಕಿಸ್ತಾನಕ್ಕೆ ಜೈಕಾರ ಹಾಕಿಲ್ಲ ಎಂದೇ ಈ ನಾಯಕರು ವಾದ ಮಾಡಿದ್ದರು. ಒಂದು ಕಡೆ ಬರ, ಮತ್ತೊಂದು ಕಡೆ ಬೆಲೆ ಏರಿಕೆ, ಇನ್ನೊಂದು ಕಡೆ ಅಭಿವೃದ್ಧಿ ಶೂನ್ಯವಾಗಿದೆ. ಕಾಂಗ್ರೆಸ್ ಸರ್ಕಾರದ ಇಂತಹ ಅನ್ಯಾಯಗಳಿಗೆ ಉತ್ತರ ನೀಡಲು ಲೋಕಸಭಾ ಚುನಾವಣೆಯೇ ಸರಿಯಾದ ಸಮಯ ಎಂದು ಹೇಳಿದರು.




