ನವದೆಹಲಿ: ಅಘಾತಕಾರಿ ಬೆಳವಣಿಗೆಯಲ್ಲಿ ಖಲಿಸ್ತಾನಿ ಹೋರಾಟಗಾರ, ಸಿಖ್ ಪ್ರತ್ಯೇಕತಾವಾದಿ ನಾಯಕ ಹಾಗೂ ಸಂಸದ ಅಮೃತ್‌ಪಾಲ್ ಸಿಂಗ್ ಅವರನ್ನು ಬೆಂಬಲಿಸುವ ಮೂಲಕ ಪಂಜಾಬ್ ಕಾಂಗ್ರೆಸ್ ಸಂಸದ ವಿವಾದಕ್ಕೀಡಾಗಿದ್ದಾರೆ.
ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿ ಜೈಲಿನಲ್ಲಿರುವ ಸಂಸದ ಅಮೃತ್‌ಪಾಲ್ ಸಿಂಗ್ ವಿಚಾರವನ್ನು ಗುರುವಾರ ಲೋಕಸಭೆ ಕಲಾಪದಲ್ಲಿ ಪ್ರಸ್ತಾಪಿಸಿದ ಪಂಜಾಬ್ ಮಾಜಿ ಸಿಎಂ ಹಾಗೂ ಸಂಸದ ಚರಣ್‌ಜಿತ್ ಸಿಂಗ್ ಚನ್ನಿ, ”20 ಲಕ್ಷ ಜನರಿಂದ ಆಯ್ಕೆಯಾಗಿರುವ ಸಂಸದರನ್ನು ಬಂಧಿಸಿ ಕಂಬಿ ಹಿಂದೆ ಇಡಲಾಗಿದೆ. ಜೈಲಿನಲ್ಲಿರುವ ಅವರು ಕ್ಷೇತ್ರದ ಜನರ ಪರವಾಗಿ ಮಾತನಾಡುವುದಕ್ಕೆ ಅವಕಾಶವೇ ಇಲ್ಲದಂತೆ ಮಾಡಲಾಗಿದೆ. ಇದೆಂತಹ ಸರಕಾರ? ಪ್ರತಿದಿನ ತುರ್ತು ಪರಿಸ್ಥಿತಿ ಕುರಿತು ಮಾತನಾಡುವ ಆಡಳಿತ ಪಕ್ಷದ ಸದಸ್ಯರಿಗೆ, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿರುವುದು ಕಾಣುತ್ತಿಲ್ಲವೆ,” ಎಂದು ಕಿಡಿಕಾರಿದರು.
ಚನ್ನಿ ಅವರ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದರೆ, ಅದು ವಯಕ್ತಿಕ ಅಭಿಪ್ರಾಯ ಎನ್ನುವ ಮೂಲಕ ವಿವಾದದಿಂದ ಅಂತರ ಕಾಯ್ದುಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸಿದೆ. ಚನ್ನಿ ಮಾತಿಗೆ ಆಡಳಿತ ಪಕ್ಷವಾದ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಖಲಿಸ್ತಾನಿಗಳ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಏನು ಎಂಬುದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಉಗ್ರರು, ಖಲಿಸ್ತಾನಿಗಳ ಪರವೇಕೆ ಸಿಂಪಥಿ?
”ಕಾಂಗ್ರೆಸ್ ನಾಯಕರು ಪ್ರತ್ಯೇಕತಾವಾದಿ ಖಲಿಸ್ತಾನಿ ನಾಯಕನನ್ನು ಬೆಂಬಲಿಸುವ ಮೂಲಕ ದೇಶಕ್ಕೆ ಗಂಡಾಂತರ ತಂದಿದ್ದಾರೆ. ಪ್ರತ್ಯೇಕ ಸಿಖ್ ರಾಜ್ಯ ,ಹೋರಾಟ ಬೆಂಬಲಿಸುವ ಮೂಲಕ ದೇಶ ವಿಭಜನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ,” ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಾಗ್ದಾಳಿ ನಡೆಸಿದರು.”ಕಾಂಗ್ರೆಸ್ ಸಂಸದ ಮತ್ತು ಪಂಜಾಬ್‌ನ ಮಾಜಿ ಸಿಎಂ ಚನ್ನಿ ಅವರು ಖಲಿಸ್ತಾನ ಪರ ಪ್ರತ್ಯೇಕತಾವಾದಿ ತೀವ್ರಗಾಮಿ ಅಮೃತಪಾಲ್ ಸಿಂಗ್ ಪರವಾಗಿ ಮಾತನಾಡುತ್ತಿದ್ದಾರೆ. ಇದೇ ಏನು ಜೈ ಸಂವಿಧಾನ? ಭಾರತವನ್ನು ತುಂಡು ತುಂಡು ಮಾಡಲು ಬಯಸಿರುವ ಪ್ರತ್ಯೇಕತಾವಾದಿಯನ್ನು ಬೆಂಬಲಿಸುವುದೇ? ರಾಹುಲ್ ಉತ್ತರ ನೀಡಲಿ- ಇಂದಿರಾ ಗಾಂಧಿ ಅವರ ಹತ್ಯೆಗೆ ಕಾರಣವಾದ ಖಲಿಸ್ತಾನ ಪರಿಕಲ್ಪನೆಯನ್ನೇ ಹೊಗಳುತ್ತಿದ್ದಾರೆ! ಕಾಂಗ್ರೆಸ್ ಯಾಕೆ ಯಾವಾಗಲೂ ಪ್ರತ್ಯೇಕತಾವಾದಿಗಳು ಮತ್ತು ಉಗ್ರರಿಗೆ ಬೆಂಬಲ ನೀಡುತ್ತಿದೆ? ಯಾಕೂಬ್ ಅಫ್ಜಲ್ 26/11 ಜಿಹಾದಿಗಳು, ಈಗ ಖಲಿಸ್ತಾನ ಉಗ್ರರು?” ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ವಾಗ್ದಾಳಿ ನಡೆಸಿದ್ದಾರೆ.
ಅಭಿಪ್ರಾಯ ವೈಯಕ್ತಿಕ ಎಂದ ಕಾಂಗ್ರೆಸ್
ಸಂಸದ ಚನ್ನಿ ಮಾತಿಗೆ ಪ್ರತಿಕ್ರಿಯೆ ನೀಡಲು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನಿರಾಕರಿಸಿದ್ದಾರೆ. ”ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ನಮ್ಮ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ,” ಎಂದು ಮಾನ್ ಹೇಳಿದ್ದಾರೆ. ಅಮೃತಪಾಲ್ ಸಿಂಗ್ ಕುರಿತಾದ ಸಂಸದ ಚರಣ್‌ಜಿತ್ ಸಿಂಗ್ ಚನ್ನಿ ಅವರ ಅಭಿಪ್ರಾಯಗಳು ಅವರ ಸ್ವಂತದ್ದಾಗಿದ್ದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಿಲುವುಗಳನ್ನು ಯಾವ ರೀತಿಯಲ್ಲಿಯೂ ಪ್ರತಿಫಲಿಸುವುದಿಲ್ಲ” ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಹೇಳಿದ್ದಾರೆ.
ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿ ಬಂಧಿತನಾಗಿದ್ದ ಖಲಿಸ್ತಾನ ಪರ ಹೋರಾಟಗಾರ ಅಮೃತಪಾಲ್ ಸಿಂಗ್, ಪಂಜಾಬ್‌ನ ಖಾಡೂರ್ ಲೋಕಸಭೆ ಕ್ಷೇತ್ರದಿಂದ ಜೈಲಿನಿಂದಲೇ ಸ್ಪರ್ಧಿಸಿ ಗೆಲುವು ಸಾಧಿಸಿದ್ದ.