ವಾಷಿಂಗ್ಟನ್: ಇರಾನ್ ರಾಕೆಟ್ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ತೀವ್ರ ದಾಳಿ ನಡೆಸಲು ಇಸ್ರೇಲ್ ಸಿದ್ಧತೆ ನಡೆಸಿತ್ತು ಎಂಬುದು ಅಮೆರಿಕದಲ್ಲಿ ಸೋರಿಕೆಯಾಗಿ ರುವ ಪತ್ರವೊಂದರಿಂದ ದೃಢಪಟ್ಟಿದೆ. ಇದೊಂದು ರಹಸ್ಯ ಪತ್ರವಾಗಿದ್ದು, ಇದು ಸರಕಾರದ ಖಜಾನೆಯಲ್ಲಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಅ.1ರಂದು ಇರಾನ್ ಮೇಲೆ ದಾಳಿ ಮಾಡಲು ಇಸ್ರೇಲ್ ಸಿದ್ಧವಾಗಿತ್ತು ಎಂಬ ವಿಷಯ ಈಗ ಸೋರಿಕೆಯಾಗಿದೆ. ಇಸ್ರೇಲ್‌ನ ಸಿದ್ಧತೆಯನ್ನು ಅಮೆರಿಕದ ಗುಪ್ತಚರ ಇಲಾಖೆ ಸಂಗ್ರಹಿಸಿದ್ದು, ಈ ಮಾಹಿತಿಯನ್ನು ಅಮೆರಿಕದ ಮಿತ್ರರಾಷ್ಟ್ರಗಳಾದ ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲೆಂಡ್ ಮತ್ತು ಬ್ರಿಟನ್ ಮಾತ್ರ ನೋಡಬೇಕು ಎಂದು ಪತ್ರದಲ್ಲಿ ನಮೂದಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.ಇರಾನ್ ವಿರುದ್ಧ ಯಾವ ರೀತಿಯ ಕ್ಷಿಪಣಿ ಬಳಕೆ ಮಾಡಿದರೆ ಅನುಕೂಲ ಎಂಬ ನಿಟ್ಟಿನಲ್ಲಿ ಪ್ರಾತ್ಯಕ್ಷಿಕೆಯನ್ನೂ ಇಸ್ರೇಲ್ ನಡೆಸಿತ್ತು ಎಂಬ ವಿಚಾರವೂ ಬೆಳಕಿಗೆ ಬಂದಿದೆ. ದಾಖಲೆ ಸೋರಿಕೆ ಬಗ್ಗೆ ತನಿಖೆ ನಡೆಸಲು ಅಮೆರಿಕ ತೀರ್ಮಾನಿಸಿದೆ.
ಯಾಹ್ಯಾ ಗಾಜಾದಲ್ಲಿದ್ದ ವೀಡಿಯೋ ಬಿಡುಗಡೆ!
ಹಮಾಸ್‌ನ ಪ್ರಮುಖ ನಾಯಕ ಯಾಹ್ಯಾ ಸಿನ್ವರ್ ಹತ್ಯೆಯಾಗುವುದಕ್ಕಿಂತಲೂ ಮೊದಲು ಗಾಜಾಪಟ್ಟಿಯಲ್ಲಿ ಓಡಾಡಿ ಕೊಂಡಿದ್ದ ಎಂದು ತೋರಿಸುವ ವೀಡಿಯೋವೊಂದನ್ನು ಇಸ್ರೇಲ್ ಬಿಡುಗಡೆ ಮಾಡಿದೆ. ಹಮಾಸ್ ನಾಯಕ ಖಾನ್ ಯೂನಿಸ್‌ನಲ್ಲಿರುವ ಸುರಂಗ ವೊಂದರಲ್ಲಿ ಅಡಗಿ ಕೊಂಡಿದ್ದ ಎಂದು ಇಸ್ರೇಲ್ ಹೇಳಿದೆ.
ಉತ್ತರ ಗಾಜಾದಲ್ಲಿ ಇಸ್ರೇಲ್ ದಾಳಿಗೆ 87 ಮಂದಿ ಸಾವು?
ಗಾಜಾ ಪಟ್ಟಿಯ ಉತ್ತರ ಭಾಗದಲ್ಲಿ ಇಸ್ರೇಲ್ ಯೋಧರು ನಡೆಸಿದ ದಾಳಿಗೆ ಕನಿಷ್ಠ 87 ಮಂದಿ ಅಸುನೀಗಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ. ಜತೆಗೆ 40ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ ಎಂದು ಪ್ಯಾಲೆಸ್ತೀನ್ ಅಧಿಕಾರಿಗಳು ತಿಳಿಸಿದ್ದಾರೆ. ಆಸ್ಪತ್ರೆಗಳಲ್ಲಿನ ವೈದ್ಯರ ಪ್ರಕಾರ ಮೃತರ ಸಂಖ್ಯೆ 100 ದಾಟಿದೆ. ಈ ದಾಳಿಯನ್ನು ವಿಶ್ವಸಂಸ್ಥೆ ಖಂಡಿಸಿದ್ದು, ಗಾಜಾ ಪಟ್ಟಿಯಲ್ಲಿ ಕರಾಳ ಘಟನೆಗಳು ಮುಂದುವರಿದಿವೆ ಎಂದು ಆತಂಕ ವ್ಯಕ್ತಪಡಿಸಿದೆ. ಇನ್ನೊಂದೆಡೆ, ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿಗೆ 3 ಸೈನಿಕರು ಅಸುನೀಗಿದ್ದಾರೆ.