ಇಂದೋರ್: ದೇಶದಲ್ಲಿ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಕಾಂಗ್ರೇಸ್ ಶಾಸಕ ಫೂಲ್ ಸಿಂಗ್ ಬರೈಯ್ಯಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.. ಮಹಿಳೆಯರ ಸೌಂದರ್ಯವೇ ಅತ್ಯಾಚಾರಕ್ಕೆ ಕಾರಣ ಎಂಬ ಹೇಳಿಕೆಯಿಂದ ವಿವಾದಕ್ಕೆ ಕಾರಣವಾಗಿದೆ..
ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಬರೈಯ್ಯಾ, ಅತ್ಯಾಚಾರಕ್ಕೆ ಜಾತಿ ಮತ್ತು ಧರ್ಮದ ವ್ಯಾಖ್ಯಾನವನ್ನೂ ನೀಡಿದ್ದಾರೆ. ಭಾರತದಲ್ಲಿ ಬಹುತೇಕ ರೇಪ್ ಸಂತ್ರಸ್ತರು ಯಾರು? ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯದವರೇ ಸಂತ್ರಸ್ತರು. ಏಕೆ ಹೀಗಾಗ್ತಿದೆ ಅಂತ ನೋಡಿದಾಗ, ಯಾವುದೇ ಒಬ್ಬ ಪುರುಷ ರಸ್ತೆಯಲ್ಲಿ ಹೋಗುವಾಗ ಸುಂದರ ಸುಂದರ ಹುಡುಗಿಯನ್ನ ನೋಡಿದ್ರೆ ಅವನ ಮನಸ್ಸು ಚಂಚಲಗೊಳ್ಳುತ್ತದೆ, ಇದರಿಂದ ಅವನು ದಾರಿ ತಪ್ಪುತ್ತಾನೆ. ಅಲ್ಲದೇ ಈ ಚಂಚಲತೆ ಅತ್ಯಾಚಾರಕ್ಕೆ ಪ್ರೇರಣೆ ನೀಡುತ್ತದೆ ಎಂದು ಹೇಳಿದ್ದಾರೆ ಬರೈಯ್ಯಾ.
ಪುಸ್ತಕ ಉಲ್ಲೇಖಿಸಿ ಮಾತನಾಡಿದ ಶಾಸಕ, ಕೆಲ ಸಮುದಾಯದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವು ತಮಗೆ ತೀರ್ಥಯಾತ್ರೆಗೆ ಸಮಾನವಾದ ಆಧ್ಯಾತ್ಮಿಕ ಅರ್ಹತೆ ತರುತ್ತದೆ ಎಂದು ಅಪರಾಧಿಗಳು ನಂಬುತ್ತಾರೆ. ಅಲ್ಲದೇ ಅತ್ಯಾಚಾರವನ್ನ ವ್ಯಕ್ತಿಗಳಿಗಿಂತ ಗುಂಪುಗಳು ಹೆಚ್ಚಾಗಿ ಮಾಡುತ್ತವೆ. ಇಂತಹ ಅಪರಾಧಗಳು ವಿಕೃತ ಮನಸ್ಥಿತಿಯಿಂದ ಉಂಟಾಗುತ್ತವೆ ಎಂದಿದ್ದಾರೆ.
ಬರೈಯ್ಯಾ ಹೇಳಿಕೆಯನ್ನ ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಶಾಸಕರ ಹೇಳಿಕೆ ಕ್ರಿಮಿನಲ್ ಮತ್ತು ವಿಕೃತ ಮನಸ್ಥಿತಿಯ ಪ್ರತಿಬಿಂಬ. ಮಹಿಳೆಯರನ್ನ ಸೌಂದರ್ಯ ಪ್ರಮಾಣದಲ್ಲಿ ಅಳೆಯುವುದು, ದಲಿತ ಮತ್ತು ಬುಡಕಟ್ಟು ಮಹಿಳೆಯರ ಮೇಲಿನ ಘೋರ ಅಪರಾಧಗಳನ್ನ ಪವಿತ್ರ ಕಾರ್ಯವೆಂದು ಬಣ್ಣಿಸುವುದು ಸ್ತ್ರೀದ್ವೇಷಿ ಹಾಗೂ ದಲಿತ ವಿರೋಧಿ ಚಿಂತನೆ ಆಗಿದೆ. ಜೊತೆಗೆ ಮಾನವೀಯತೆಯ ಮೇಲಿನ ನೇರ ದಾಳಿಯೂ ಆಗಿದೆ ಎಂದು ಕಿಡಿ ಕಾರಿದೆ. ಅಲ್ಲದೇ ಬರೈಯ್ಯಾರನ್ನ ತಕ್ಷಣವೇ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಒತ್ತಾಯಿಸಿದೆ.


